Monday, August 27, 2012

ಬೀದರ ಲಾನ್‌ ಟೆನ್ನಿಸ್‌ ಈಗ ಅಂತಾರಾಷ್ಟ್ರೀಯ



ಎಲ್ಲವೂ ಅಂದುಕೊಂಡಂತೆ ನಡೆದರೆ ಹಿಂದುಳಿದ ಹಣೆಪಟ್ಟಿ ಹೊತ್ತ ಬೀದರ ಜಿಲ್ಲೆ 'ಲಾನ್‌ ಟೆನಿಸ್‌' ಅಂತಾರಾಷ್ಟ್ರೀಯ ನಕಾಶೆಯಲ್ಲಿ ಪ್ರಜ್ವಲಿಸಲಿದೆ.

ಕರ್ನಾಟಕ ರಾಜ್ಯ ಲಾನ್‌ ಟೆನ್ನಿಸ್‌ ಅಸೋಸಿಯೇಷನ್‌ (ಕೆಎಸ್‌ಎಲ್‌ಟಿಎ) ಬೀದರನಲ್ಲಿ ಅಕ್ಟೋಬರ್‌ ಮೊದಲ ವಾರದಲ್ಲಿ 'ಅಂತಾರಾಷ್ಟ್ರೀಯ ಮಟ್ಟದ ಮಹಿಳಾ ಟೆನ್ನಿಸ್‌ ಒಕ್ಕೂಟ' (ಐಟಿಎಫ್‌) ಟೂರ್ನಿ ಆಯೋಜಿಸಲು ಸಜ್ಜಾಗಿದ್ದು, ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಪಡೆದಿರುವ ದಕ್ಷಿಣ ಏಷಿಯಾ ದೇಶಗಳ ಮಹಿಳಾ ಕ್ರೀಡಾಪಟುಗಳು ಭಾಗವಹಿಸಲಿದ್ದಾರೆ.

ಇಂಥದೊಂದು ಟೂರ್ನಾಮೆಂಟ್‌ ಆಯೋಜನೆಗೆ ಅಂತಾರಾಷ್ಟ್ರೀಯ ಗುಣಮಟ್ಟದ ಮೂರು ಸಿಂಥೆಟಿಕ್‌ ಟೆನಿಸ್‌ ಕ್ರೀಡಾಂಗಣಗಳ ಅವಶ್ಯಕತೆ ಇದೆ. ಈಗಾಗಲೇ ಬೀದರ ಪೊಲೀಸ್‌ ಟೆನಿಸ್‌ ಕ್ಲಬ್‌ ಎರಡು ಅತ್ಯಾಧುನಿಕ ಟೆನ್ನಿಸ್‌ ಅಂಗಣಗಳನ್ನು ಹೊಂದಿದೆ. ಮೂರನೇ ಟೆನ್ನಿಸ್‌ ಕೋರ್ಟ್‌ ನಿರ್ಮಾಣದ ಕಾರ್ಯ ಭರದಿಂದ ಸಾಗಿದ್ದು, ಮುಂದಿನ ಮೂರ್‍ನಾಲ್ಕು ವಾರಗಳಲ್ಲಿ ಪೂರ್ಣಗೊಳ್ಳಲಿದೆ.

ಅಂದ ಹಾಗೆ ಬೀದರನಲ್ಲಿ ಅಂತಾರಾಷ್ಟಿ†àಯ ಮಟ್ಟದ ಒಂದು ಟೆನ್ನಿಸ್‌ ಟೂರ್ನಾಮೆಂಟ್‌ ಆಯೋಜನೆ ಕನಸು ಬಿತ್ತಿರುವುದು ಕೆಎಸ್‌ಎಲ್‌ಟಿಎ ಸಂಸ್ಥೆ. ಕಳೆದ 2011ರ ಆಗಸ್ಟ್‌ನಲ್ಲಿ ನಡೆದ ರಾಜ್ಯಮಟ್ಟದ ಟೆನ್ನಿಸ್‌ ಪಂದ್ಯಾವಳಿಯೇ ಸಂಸ್ಥೆಯ ಚಿತ್ತ ಬೀದರನತ್ತ ಹರಿಸುವಂತೆ ಮಾಡಿದೆ. ಐಟಿಎಫ್‌ ಟೂರ್ನಿ ಆಯೋಜನೆ ಕುರಿತಂತೆ ಸಂಸ್ಥೆ ಗೃಹ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿ ಒಪ್ಪಿಗೆ ಪಡೆದುಕೊಂಡಿದೆ.

ಐತಿಹಾಸಿಕ ಕೋಟೆಯ ಪೂರ್ವದಲ್ಲಿ, ಮಾಂಜ್ರಾ ನದಿ ಕಣಿವೆಯ ಅಂಚಿನಲ್ಲಿ ನಿರ್ಮಿಸಲಾದ ಟೆನ್ನಿಸ್‌ ಅಂಗಣಗಳು ಕಣ್ಮನ ಸೆಳೆಯುತ್ತಿದ್ದು, ಕೋರ್ಟ್‌ಗಳ ನಿರ್ಮಾಣಕ್ಕೆ ಪ್ರೇರಣೆಯಾದದ್ದು ಎಸ್‌.ಪಿ ಸತೀಶಕುಮಾರ ಅವರು. ಸದ್ಯ ಸಿಂಧನೂರಿನ ಖಾಸಗಿ ಟೆನ್ನಿಸ್‌ ಕೋರ್ಟ್‌ ಬಿಟ್ಟರೆ ಉತ್ತರ ಕರ್ನಾಟಕದಲ್ಲಿ ಸಾರ್ವಜನಿಕರಿಗೆ ನಿರ್ಮಾಣವಾಗಿರುವ ಮೊದಲ ಸಿಂಥೆಟಿಕ್‌ ಕೋರ್ಟ್‌ ಇದಾಗಿದೆ.

ಸಿರಿವಂತ ಜನರು ಮಾತ್ರ ಟೆನ್ನಿಸ್‌ ಆಡುತ್ತಾರೆ ಎಂಬ ಭಾವನೆ ಇದೆ. ಆದರೆ, ಜಿಲ್ಲಾ ಪೊಲೀಸ್‌ ಟೆನ್ನಿಸ್‌ ಅಕಾಡೆಮಿ ಅದನ್ನು ಸುಳ್ಳಾಗಿಸಿದೆ. ಕ್ರೀಡಾ ಆಸಕ್ತಿ ಹೊಂದಿದ ಪ್ರತಿಭಾವಂತ ಪಟುಗಳಿಗೆ ಈ ಅಂತಾರಾಷ್ಟ್ರೀಯ ಗುಣಮಟ್ಟದ ಟೆನ್ನಿಸ್‌ ಕ್ರೀಡಾಂಗಣ ಲಭ್ಯವಾಗಿರುವುದು ಒಂದು ವಿನೂತನ ಮೈಲುಗಲ್ಲು ಎನ್ನಬಹುದು.

ಈಗಾಗಲೇ ಬೀದರನಲ್ಲಿ ಎರಡು ಟೆನ್ನಿಸ್‌ ಕೋರ್ಟ್‌ಗಳನ್ನು ನಿರ್ಮಿಸಲಾಗಿದೆ. ಇಲಾಖೆಗೆ ಸೇರಿದ ನಿವೇಶನದಲ್ಲಿ ಮೂರನೇ ಅಂಗಣಕ್ಕೆ ಅಗತ್ಯ ಸೌಲಭ್ಯಕ್ಕಾಗಿ ಜಿಲ್ಲಾಡಳಿತದಿಂದ 10 ಲಕ್ಷ ರೂ. ನೆರವು ಸಿಕ್ಕಿದೆ. ಇದರಲ್ಲಿ ಸಂಸದ ಧರಂಸಿಂಗ್‌ ಮತ್ತು ಶಾಸಕ ರಹೀಮ್‌ ಖಾನ್‌ ಅವರ ನಿಧಿಯಿಂದ ತಲಾ 5 ಲಕ್ಷ ರೂ. ಸೇರಿದೆ. ಇದರೊಟ್ಟಿಗೆ ಖಾಸಗಿ ದಾನಿಗಳ ಸಹಾಯ ಪಡೆಯಲು ಉದ್ಧೇಶಿಸಲಾಗಿದೆ ಎನ್ನುತ್ತಾರೆ ಎಸ್‌.ಪಿ ಸತೀಶಕುಮಾರ.

ಬೀದರನ ಕೆಲವು ಖಾಸಗಿ ಶಾಲೆ ಮತ್ತು ಇಂಜಿನಿಯರಿಂಗ್‌ ಕಾಲೇಜುಗಳು ತಮ್ಮ ಆವರಣದಲ್ಲಿ ಅತ್ಯಾಧುನಿಕ ಟೆನ್ನಿಸ್‌ ಅಂಗಣಗಳನ್ನು ನಿರ್ಮಿಸಲು ಒಲವು ತೋರಿವೆ. ಜೊತೆಗೆ ಬಸವಕಲ್ಯಾಣದಲ್ಲಿಯೂ ಅಂತಾರಾಷ್ಟ್ರೀಯ ಗುಣಮಟ್ಟದ ಕೋರ್ಟ್‌ ನಿರ್ಮಾಣವಾಗಲಿದೆ. ಈ ಎಲ್ಲ ಬೆಳವಣಿಗೆಯನ್ನು ಗಮನಿಸಿದರೆ ಕೆಲವೇ ವರ್ಷಗಳಲ್ಲಿ ಬೀದರ ಹೆಸರು ಟೆನ್ನಿಸ್‌ ಭೂಪಟದಲ್ಲಿ ದಾಖಲಾಗಬಹುದು ಎಂಬ ಆಶಯ ವ್ಯಕ್ತಪಡಿಸಿದ್ದಾರೆ.

ಆಂಧ್ರಪ್ರದೇಶದ ಭೀಮಾವರ್‌ನಲ್ಲಿ ನಿರ್ಮಿಸಲಾಗಿದ್ದ ಅಂಗಣಗಳಲ್ಲಿ ಹೀಗೆ ಸಣ್ಣ ಮಟ್ಟದ ಪಂದ್ಯಗಳನ್ನು ನಡೆಸಲಾಗುತ್ತಿತ್ತು. ಈಗ ಪ್ರತಿ ವರ್ಷ ಅಂತಾರಾಷ್ಟ್ರೀಯ ಮಟ್ಟದ ಐಟಿಎಫ್‌ ಟೂರ್ನಿಗಳು ಆಯೋಜನೆಗೊಳ್ಳುತ್ತಿವೆ. ಇಂಥದ್ದೊಂದು ಬೆಳವಣಿಗೆಯಿಂದ ಭವಿಷ್ಯದಲ್ಲಿ ಬೀದರನಲ್ಲಿಯೂ ಹೊಸ ಕನಸುಗಳು ಮೂಡಿಸುತ್ತಿವೆ.

ಒಟ್ಟಾರೆ ಫುಟ್‌ಬಾಲ್‌, ಹಾಕಿ ಕ್ರೀಡೆಗಳಿಗೆ ಸಂಬಂಧಿಸಿದಂತೆ ರಾಷ್ಟ್ರಮಟ್ಟದ ಕ್ರೀಡಾಕೂಟಗಳನ್ನು ಆಯೋಜಿಸುವ ಮೂಲಕ ಗಮನ ಸೆಳೆದಿದ್ದ ಬೀದರನಲ್ಲಿ ಈಗ ಟೆನ್ನಿಸ್‌ನ ಹೊಸ ಅಧ್ಯಾಯವೊಂದು ಪ್ರಾರಂಭವಾಗಿದೆ.




source: http://kannada.yahoo.com/%E0%B2%AC-%E0%B2%A6%E0%B2%B0-%E0%B2%B2-%E0%B2%A8-%E0%B2%9F-172119011.html;_ylt=As1ge3O62V2edemAwCYvNjTupe5_;_ylu=X3oDMTRja2RvYnBlBG1pdANCaWRhciBNb2R1bGUgU3RvcnlsaXN0BHBrZwNkNWE4NGY1ZC05NzE1LTM3NzQtODFjMi1kNTQ1NzU2NDQ1ZWUEcG9zAzE1BHNlYwNNZWRpYVN0b3J5TGlzdExQVGVtcAR2ZXIDY2ExYTVjZGMtZWNmYS0xMWUxLTlkZWItMTY5ZWVjODdhNWM2;_ylg=X3oDMTJldmZlNjBlBGludGwDaW4EbGFuZwNrbi1pbgRwc3RhaWQDBHBzdGNhdANob21lfOCynOCyv.CysuCzjeCysuCzhuCyl.Cys.CzgQRwdANzZWN0aW9ucw--;_ylv=3

No comments:

Post a Comment