Thursday, September 18, 2014

ಬರಪೀಡಿತ ಜಿಲ್ಲೆ ಪ್ರಸ್ತಾವ: ಸಚಿವೆ ಉಮಾಶ್ರೀ



ಜಿಲ್ಲೆಯ ಎಲ್ಲೆಡೆ ಸಂಭ್ರಮದ ಹೈದರಾಬಾದ್ ಕರ್ನಾಟಕ ವಿಮೋಚನಾ ದಿನಾಚರಣೆ  ಬರಪೀಡಿತ ಜಿಲ್ಲೆ ಪ್ರಸ್ತಾವ: ಸಚಿವೆ ಉಮಾಶ್ರೀ




ಹೈದರಾಬಾದ್ ಕರ್ನಾಟಕ ವಿಮೋಚನಾ ದಿನದ ನಿಮಿತ್ತ ಬೀದರ್‌ನಲ್ಲಿ ಬುಧವಾರ ನಡೆದ ಸಮಾರಂಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವೆ ಉಮಾಶ್ರೀ ಗೌರವ ವಂದನೆ ಸ್ವೀಕರಿಸಿದರು

ಬೀದರ್: ‘ಜಿಲ್ಲೆಯನ್ನು ಬರಪೀಡಿತ ಎಂದು ಘೋಷಿಸಲು ಮುಖ್ಯಮಂತ್ರಿಗೆ ಪ್ರಸ್ತಾವ ಸಲ್ಲಿಸಲಾಗಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವೆ ಉಮಾಶ್ರೀ ತಿಳಿಸಿದರು. ಹೈದರಾಬಾದ್ ಕರ್ನಾಟಕ ವಿಮೋಚನಾ ದಿನದ ನಿಮಿತ್ತ ಬುಧವಾರ ನಗರದ ನೆಹರೂ ಕ್ರೀಡಾಂಗಣದಲ್ಲಿ ರಾಷ್ಟ್ರ ಧ್ವಜಾರೋಹಣ ಮಾಡಿ ಮಾತನಾಡಿದರು.

ಜಿಲ್ಲೆಗೆ ಈ ಬಾರಿ ಮುಂಗಾರು ತಡವಾಗಿ ಪ್ರವೇಶಿಸಿದೆ. ಆಗಸ್ಟ್ ಎರಡನೇ ವಾರದವರೆಗೂ ಸತತ ಮೂರರಿಂದ 8 ವಾರಗಳ ಕಾಲ ಮಳೆ ಕೊರತೆ ಉಂಟಾಗಿದೆ. ಜೂನ್‌ ತಿಂಗಳು ಶೇ 57 ಮತ್ತು ಜುಲೈ ತಿಂಗಳಲ್ಲಿ ಶೇ 40 ರಷ್ಟು ಕಡಿಮೆ ಮಳೆಯಾಗಿದೆ ಎಂದು ಹೇಳಿದರು.
ಮಳೆ ಕೊರತೆ ಕಾರಣ ಉದ್ದು, ಹೆಸರು, ಸೋಯಾ ಅವರೆ, ತೊಗರಿ ಮತ್ತಿತರರ ಬೆಳೆಗಳು ನಷ್ಟವಾಗಿವೆ. ಆಗಸ್ಟ್‌ ತಿಂಗಳು ಬಸವಕಲ್ಯಾಣ ತಾಲ್ಲೂಕಿನಲ್ಲಿ ವಾಡಿಕೆಗಿಂತ ಹೆಚ್ಚು ಅಂದರೆ 336.6 ಮಿ.ಮೀ. ಮಳೆ ಆಗಿದ್ದು, ಕೆರೆಕಟ್ಟೆಗಳು ಒಡೆದಿವೆ. ಪ್ರವಾಹ­ದಿಂದಾಗಿ 54 ಗ್ರಾಮಗಳಲ್ಲಿ 3,954 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ನಷ್ಟಕ್ಕೀಡಾಗಿದೆ. ಸುಮಾರು ₨ 21.04 ಕೋಟಿ ಬೆಳೆ ಹಾನಿ ಆಗಿರುವ ಬಗ್ಗೆ ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದೆ ಎಂದರು.

ಕೇಂದ್ರ ಸರ್ಕಾರ ಹಿಂದುಳಿದ ಪ್ರದೇಶಗಳ ಅನುದಾನ ನಿಧಿ ಅಡಿಯಲ್ಲಿ ಆರು ಜಿಲ್ಲೆಗಳನ್ನು ಆಯ್ಕೆ ಮಾಡಿದ್ದು, ಬೀದರ್ ಕೂಡ ಸೇರಿದೆ. ಯೋಜನೆಯಡಿ 2013–-14ನೇ ಸಾಲಿನಲ್ಲಿ ಜಿಲ್ಲೆಗೆ ₨ 22.75 ಕೋಟಿ ನಿಗದಿಪಡಿಸಲಾಗಿದೆ. ಹೈದರಾಬಾದ್ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ (ಎಚ್‌ಕೆಆರ್‌ಡಿಬಿ) ಕ್ರಿಯಾ ಯೋಜನೆಯಲ್ಲಿ ಜಿಲ್ಲೆಗೆ ₨ 15.26 ಕೋಟಿ ನಿಗದಿಪಡಿಸಿದ್ದು, ಈಗಾಗಲೇ ₨ 14.90 ಕೋಟಿ ಅನುದಾನ ಮಂಜೂರಾಗಿದೆ ಎಂದು ಹೇಳಿದರು.

ಜಿಲ್ಲೆಯಲ್ಲಿ 371(ಜೆ) ಮೀಸಲಾತಿ ಪ್ರಮಾಣ ಪತ್ರ ಕೋರಿ 26,090 ಅರ್ಜಿ ಸಲ್ಲಿಕೆಯಾಗಿವೆ. ಇದರಲ್ಲಿ 26,013 ಜನರಿಗೆ ಪ್ರಮಾಣ ಪತ್ರ ವಿತರಿಸಲಾಗಿದೆ. ಜಿಲ್ಲಾಡಳಿತದಿಂದ 279 ಅಭ್ಯರ್ಥಿಗಳಿಗೆ ನಾಗರಿಕ ಸೇವಾ ಪರೀಕ್ಷೆಗಳ ಪೂರ್ವ­ಭಾವಿ ತರಬೇತಿ ಪರೀಕ್ಷೆ ನಡೆಸಲಾಗಿದ್ದು, 51 ಜನರಿಗೆ ವಸತಿ ಸಹಿತ ಉಚಿತ ತರಬೇತಿ ನೀಡಲಾಗಿದೆ. 432 ಗ್ರಾಮೀಣ, ಬಡ ವಿದ್ಯಾರ್ಥಿಗಳಿಗೆ ಉಚಿತ ವಸತಿ ಸಹಿತ ಸೇತುಬಂಧ ಕಾರ್ಯ­ಕ್ರಮ ನಡೆಸಲಾಗಿದೆ ಎಂದು ವಿವರಿಸಿದರು.

ಮಾಜಿ ಸಚಿವ ಭೀಮಣ್ಣ ಖಂಡ್ರೆ, ಶಾಸಕ ಮಲ್ಲಿಕಾರ್ಜುನ ಖೂಬಾ, ಜಿಲ್ಲಾಧಿಕಾರಿ ಡಾ.ಪಿ.ಸಿ.ಜಾಫರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಧೀರಕುಮಾರ ರೆಡ್ಡಿ, ನಗರಸಭೆ ಅಧ್ಯಕ್ಷೆ ಫಾತಿಮಾ ಅನ್ವರ್ ಅಲಿ, ಉಪ ವಿಭಾಗಾಧಿಕಾರಿ ಆರತಿ ಆನಂದ, ಐಎಎಸ್‌ ಅಧಿಕಾರಿ ಡಾ.ಕೆ.ರಾಜೇಂದ್ರಕುಮಾರ ಇದ್ದರು.

ಭಾಲ್ಕಿ ವರದಿ

ಅಖಂಡ ಭಾರತದ ವಿಮೋಚನೆಗಾಗಿ ಹೋರಾಟ ಮಾಡಿದ ಮಹನೀಯರನ್ನು ಸ್ಮರಿಸುವುದು ಎಲ್ಲರ ಕರ್ತವ್ಯ ಎಂದು ಶಾಸಕ ಈಶ್ವರ ಖಂಡ್ರೆ ಹೇಳಿದರು. ಇಲ್ಲಿನ ಮಿನಿ ವಿಧಾನಸೌಧದ ಆವರಣದಲ್ಲಿ ಬುಧವಾರ ಆಯೋಜಿಸಿದ್ದ ಹೈ.ಕ. ವಿಮೋಚನಾ ದಿನಾಚರಣೆ ಅಧ್ಯಕ್ಷತೆ ವಹಿಸಿ ಮಾತನಾಡಿ, ರಾಷ್ಟ್ರ ಸ್ವಾತಂತ್ರ್ಯ ಪಡೆದರೂ ಹೈದ್ರಾಬಾದ್‌ ಕರ್ನಾಟಕ ಪ್ರದೇಶ ಸುಮಾರು 13 ತಿಂಗಳವರೆಗೆ ನಿಜಾಮನ ಅಡಳಿತದಲ್ಲೇ ಉಳಿದಿತ್ತು. ಇಲ್ಲಿನ ಜನರು ಸಾಕಷ್ಟು ನೋವು, ಕೌರ್ಯ ಅನುಭವಿಸುವಂತಾಗಿತ್ತು. ಅದರಿಂದ ಮುಕ್ತಗೊಳಿಸಿದ ಸರ್ದಾರ್ ವಲ್ಲಭಭಾಯಿ ಪಟೇಲರು ಸದಾ ಸ್ಮರಣೀಯರು ಎಂದು ಖಂಡ್ರೆ ಹೇಳಿದರು.

ಸಾನಿಧ್ಯ ವಹಿಸಿದ್ದ ಡಾ.ಬಸವಲಿಂಗ ಪಟ್ಟದ್ದೇವರು ಮಾತನಾಡಿ, ಸಹಸ್ರಾರು ಜನರ ಹೋರಾಟದ ಫಲವಾಗಿ ದೊರಕಿರುವ ಸ್ವಾತಂತ್ರ್ಯದ ಮಹತ್ವವನ್ನು ಪ್ರತಿಯೊಬ್ಬರೂ ಅರ್ಥ ಮಾಡಿಕೊಳ್ಳಬೇಕು ಎಂದರು. ಉಪನ್ಯಾಸಕ ಅಶೋಕ ಮೈನಳ್ಳೆ ವಿಶೇಷ ಉಪನ್ಯಾಸ ಮಂಡಿಸಿದರು. ತಾ.ಪಂ ಅಧ್ಯಕ್ಷ ಶಿವಕುಮಾರ ಬಾಳೂರ, ಪುರಸಭೆ ಅಧ್ಯಕ್ಷ ವಿಶ್ವನಾಥ ಮೋರೆ, ಸ್ವಾತಂತ್ರ್ಯ ಹೋರಾಟ­ಗಾರರ ಸಂಘದ ಅಧ್ಯಕ್ಷ ರಾಮರಾವ ಕುಲಕರ್ಣಿ, ಎಪಿಎಂಸಿ ಅಧ್ಯಕ್ಷ ಅಶೋಕ ಪಾಟೀಲ ಮುಂತಾದವರು ಇದ್ದರು. ತಹಸೀಲ್ದಾರ ರಮೇಶ ಪೆದ್ದೆ ಸ್ವಾಗತಿಸಿದರು. ಗಣಪತರಾವ ಕಲ್ಲೂರೆ ವಂದಿಸಿದರು.



Source:http://www.prajavani.net/article/%E0%B2%AC%E0%B2%B0%E0%B2%AA%E0%B3%80%E0%B2%A1%E0%B2%BF%E0%B2%A4-%E0%B2%9C%E0%B2%BF%E0%B2%B2%E0%B3%8D%E0%B2%B2%E0%B3%86-%E0%B2%AA%E0%B3%8D%E0%B2%B0%E0%B2%B8%E0%B3%8D%E0%B2%A4%E0%B2%BE%E0%B2%B5-%E0%B2%B8%E0%B2%9A%E0%B2%BF%E0%B2%B5%E0%B3%86-%E0%B2%89%E0%B2%AE%E0%B2%BE%E0%B2%B6%E0%B3%8D%E0%B2%B0%E0%B3%80

No comments:

Post a Comment