ಸರ್ದಾರ್ ವಲ್ಲಭಭಾಯಿ ಪಟೇಲ್ ಪುತ್ಥಳಿ ಸ್ಥಾಪನೆಗೆ ಅಮಿತ್ ಷಾ ಅಡಿಗಲ್ಲು
ಬಸವಕಲ್ಯಾಣ ತಾಲ್ಲೂಕು ಗೋರ್ಟಾದಲ್ಲಿ ನಡೆದ ಹುತಾತ್ಮರ ಸ್ಮಾರಕ ನಿರ್ಮಿಸಲು ಶಂಕುಸ್ಥಾಪನೆ ನೆರವೇರಿಸುವ ಕಾರ್ಯಕ್ರಮದಲ್ಲಿ ಗೋರ್ಟಾದಲ್ಲಿ ನಡೆದ ಸಮಾರಂಭದಲ್ಲಿ ಸೇರಿದ್ದ ಬೃಹತ್ ಜನಸಮೂಹ
ಬೀದರ್: ‘ಹೈದರಾಬಾದ್– ಕರ್ನಾಟಕ ಭಾಗದಲ್ಲಿ ನಿಜಾಮರ ಆಡಳಿತದಿಂದ ವಿಮೋಚನೆಗೆ ನಡೆದ ಹೋರಾಟದಲ್ಲಿ ಹುತಾತ್ಮರಾದವರ ನೆನಪಿಗೆ ಬಸವಕಲ್ಯಾಣ ತಾಲ್ಲೂಕು ಗೋರ್ಟಾ ಗ್ರಾಮದಲ್ಲಿ ಸ್ಮಾರಕ ನಿರ್ಮಿಸುವುದು, ಹುತಾತ್ಮರಿಗೆ ಸಲ್ಲಿಸುವ ಶ್ರದ್ಧಾಂಜಲಿಯಷ್ಟೇ ಅಲ್ಲ; ಯುವ ಮತ್ತು ಮುಂದಿನ ಪೀಳಿಗೆಗೆ ಇತಿಹಾಸವನ್ನು ತಿಳಿಸಿಕೊಡುವ ಪ್ರಯತ್ನ’ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಪ್ರತಿಪಾದಿಸಿದರು.
ಹೈದರಾಬಾದ್ ಕರ್ನಾಟಕ ವಿಮೋಚನಾ ದಿನವಾದ ಬುಧವಾರ ಜಿಲ್ಲೆಯ ಬಸವಕಲ್ಯಾಣ ತಾಲ್ಲೂಕಿನ ಗೋರ್ಟಾ ಗ್ರಾಮದಲ್ಲಿ ಹುತಾತ್ಮರ ಸ್ಮಾರಕ ನಿರ್ಮಾಣ ಮತ್ತು ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಪುತ್ಥಳಿ ಸ್ಥಾಪನೆಗೆ ಶಂಕುಸ್ಥಾಪನೆ ನೆರವೇರಿಸಿದ ಅವರು, ಹುತಾತ್ಮರ ಸ್ಮಾರಕ ನಿರ್ಮಾಣವನ್ನು ರಾಜಕೀಯಕ್ಕೆ ಬಳಸಿಕೊಳ್ಳಲಾಗುತ್ತಿದೆ ಎಂಬುದನ್ನು ಪರೋಕ್ಷವಾಗಿ ತಳ್ಳಿಹಾಕಿದರು.
ಗೋರ್ಟಾ ಗ್ರಾಮದಲ್ಲಿ ನಡೆದ ಹತ್ಯಾಕಾಂಡವನ್ನು ದಕ್ಷಿಣದ ಜಲಿಯನವಾಲಾಬಾಗ್ ಘಟನೆ ಎಂದೂ ಬಿಂಬಿಸಲಾಗುತ್ತದೆ. ಇಂಥ ಸ್ಥಳದಲ್ಲಿ ಹುತಾತ್ಮರ ಸ್ಮಾರಕವನ್ನು ಕಾರ್ಯಕರ್ತರಿಂದಲೇ ದೇಣಿಗೆ ಸಂಗ್ರಹಿಸಿ ನಿರ್ಮಿಸಲು ಯುವ ಮೋರ್ಚಾ ಮುಂದಾಗಿರುವುದು ಸ್ತುತ್ಯಾರ್ಹ ಎಂದು ಶ್ಲಾಘಿಸಿದರು.
ಸೆ. 17ರಂದು ಹೈದರಾಬಾದ್ ಕರ್ನಾಟಕದ ವಿಮೋಚನಾ ದಿನವಷ್ಟೇ ಅಲ್ಲ; ಪ್ರಧಾನಿ ನರೇಂದ್ರ ಮೋದಿ ಜನ್ಮದಿನವೂ ಹೌದು. ಮುಂದಿನ ವರ್ಷ ಇದೇ ದಿನ ಸ್ಮಾರಕ ಹಾಗೂ ಪಟೇಲ್ ಅವರ ಪುತ್ಥಳಿಯನ್ನು ಮೋದಿ ಅನಾವರಣ ಮಾಡುವಂತೆ ಆಗಲಿ ಎಂದು ಆಶಿಸಿದರು.
ಇತಿಹಾಸ ಮೆಲುಕು ಹಾಕಿದ ಅವರು, ಹೈದರಾಬಾದ್ ಒಳಗೊಂಡು 350 ಸಂಸ್ಥಾನಗಳನ್ನು ಭಾರತದ ಒಕ್ಕೂಟದಲ್ಲಿ ಸೇರಿಸುವ ಮಹತ್ವದ ಕಾರ್ಯವನ್ನು ಸರ್ದಾರ ವಲ್ಲಭಭಾಯಿ ಪಟೇಲ್ ಮಾಡಿದ್ದಾರೆ. ಕಾಶ್ಮೀರ ವಿಷಯದಲ್ಲಿಯೂ ಜವಾಹರಲಾಲ್ ನೆಹರೂ ಬದಲಿಗೆ ಪಟೇಲ್ ಅವರೇ ತೀರ್ಮಾನ ಕೈಗೊಂಡಿದ್ದರೆ ಇಂದು ಆ ಸಮಸ್ಯೆಯೇ ಇರುತ್ತಿರಲಿಲ್ಲ ಎಂದರು.
‘ಗಾಂಧೀಜಿಯವರ ಅನುಯಾಯಿ ಆಗಿದ್ದ ಪಟೇಲ್‌ರು ದಿಟ್ಟ ನಿರ್ಧಾರ ಕೈಗೊಳ್ಳುವ ಮನಸ್ಥಿತಿ ಹೊಂದಿದ್ದರು. ನಿಷ್ಕಳಂಕ ರಾಜಕಾರಣಿಯೂ ಆಗಿದ್ದರು. ಅವರು ಮೃತಪಟ್ಟಾಗ ಅವರ ಖಾತೆಯಲ್ಲಿ ಕೇವಲ ₨ 150 ಇತ್ತು. ಕುಟುಂಬ ರಾಜಕಾರಣಕ್ಕೂ ಆಸ್ಪದ ಕೊಡಲಿಲ್ಲ. ನಿಜಾಮರ ಆಡಳಿತದ ಪರ ಇದ್ದ ರಜಾಕಾರರ ವಿರುದ್ಧ ಹೋರಾಡಿ ಗೋರ್ಟಾ ಗ್ರಾಮದಲ್ಲಿ ಅನೇಕರು ಹುತಾತ್ಮರಾದರು. ಈ ಭಾಗದಲ್ಲಿ ಕೋಮು ದಳ್ಳುರಿ ಭುಗಿಲೆದ್ದಿತ್ತು. ಪಟೇಲ್ ಅಂಥ ಪರಿಸ್ಥಿತಿಯನ್ನು ನಿಯಂತ್ರಿಸಿ ಈ ಭಾಗಕ್ಕೆ ಸ್ವಾತಂತ್ರ್ಯ ತಂದುಕೊಟ್ಟರು’ ಎಂದರು.
ಕೇಂದ್ರ ಸಚಿವರಾದ ಡಿ.ವಿ.ಸದಾನಂದಗೌಡ, ಅನಂತಕುಮಾರ್, ಜಿ.ಎಂ.ಸಿದ್ದೇಶ್ವರ, ಸಂಸದ ಬಿ.ಎಸ್. ಯಡಿಯೂರಪ್ಪ, ವಿಧಾನಸಭೆ ಪ್ರತಿಪಕ್ಷದ ನಾಯಕ ಜಗದೀಶ್ ಶೆಟ್ಟರ್, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಪ್ರಹ್ಲಾದ್ ಜೋಶಿ, ಬಿಜೆಪಿ ಯುವ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ಅನುರಾಗ್ ಠಾಕೂರ್, ರಾಜ್ಯ ಯುವ ಮೋರ್ಚಾ ಅಧ್ಯಕ್ಷ ಮುನಿರಾಜುಗೌಡ, ಸಂಸದರಾದ ಭಗವಂತ ಖೂಬಾ, ಶೋಭಾ ಕರಂದ್ಲಾಜೆ ಇತರರು ಇದ್ದರು.
ಗೋರ್ಟಾ ಗ್ರಾಮದಲ್ಲಿ ಸ್ಮಾರಕ ನಿರ್ಮಾಣ ಮತ್ತು ಪುತ್ಥಳಿ ಸ್ಥಾಪನೆ ಕಾರ್ಯವನ್ನು ಬಿಜೆಪಿ ಯುವ ಮೋರ್ಚಾ ಕೈಗೆತ್ತಿಕೊಂಡಿದ್ದು, ಒಂದು ವರ್ಷದಲ್ಲಿ ಪೂರ್ಣಗೊಳಿಸಿ 2015ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಂದಲೇ ಉದ್ಘಾಟಿಸುವ ಗುರಿಯನ್ನು ಹೊಂದಿದೆ.
source:http://www.prajavani.net/article/%E0%B2%87%E0%B2%A4%E0%B2%BF%E0%B2%B9%E0%B2%BE%E0%B2%B8-%E0%B2%A4%E0%B2%BF%E0%B2%B3%E0%B2%BF%E0%B2%B8%E0%B2%B2%E0%B3%81-%E0%B2%B8%E0%B3%8D%E0%B2%AE%E0%B2%BE%E0%B2%B0%E0%B2%95
No comments:
Post a Comment