ಬೀದರ್: ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದಲ್ಲಿಯೇ ಕನ್ನಡದ ಬಗ್ಗೆ ಉದಾಸೀನತೆ ಮನೆಮಾಡಿದೆ. ಆದರೆ, ಗಡಿ ಜಿಲ್ಲೆ ಬೀದರ್‌ನಲ್ಲೊಬ್ಬ ವೃದ್ಧ ನಾವಿಕ ನೆರೆ ರಾಜ್ಯದ ಕನ್ನಡ ಕಲಿಯುವ ಕಂದಮ್ಮಗಳಿಗೆ ಮೂರು ದಶಕಗಳಿಂದ ಆಸರೆಯಾಗಿ ನಿಂತಿದ್ದಾನೆ. ನಿತ್ಯ ಪುಕ್ಕಟೆಯಾಗಿ ನದಿಯ ಈಚೆಗಿನ ಶಾಲೆಗೆ ತಲುಪಿಸಿ ಕನ್ನಡ ಭಾಷೆಗೆ ಮಕ್ಕಳನ್ನು ಬೆಸೆಯುವ ಪ್ರಯತ್ನ ಮಾಡುತ್ತಿದ್ದಾನೆ.
ಈ ಮಕ್ಕಳಿಗೆ ದೋಣಿಯೇ ಆಸರೆ: ಆ ಕಡೆ ಆಂಧ್ರಪ್ರದೇಶ, ಈ ಕಡೆ ಕರ್ನಾಟಕ. ಎರಡೂ ಗಡಿ ರಾಜ್ಯಗಳನ್ನು ಬೇರ್ಪಡಿಸಿ ಹರಿಯುತ್ತದೆ ಬೀದರ್‌ನ ಜೀವ ನದಿ ಮಾಂಜ್ರಾ. ಆಂಧ್ರಪ್ರದೇಶದಲ್ಲಿರುವ ಗೌಂಡಗಾಂವನ ಮಕ್ಕಳು ಕನ್ನಡ ಕಲಿಯ ಬೇಕಾದರೆ ನದಿ ದಾಟಿ ಕರ್ನಾಟಕಕ್ಕೆ ಬರಬೇಕು. ಮಕ್ಕಳು ಒಂದು ದಡದಿಂದ ಮತ್ತೂಂದು ದಡ ಸೇರಲು ದೋಣಿ ಮತ್ತು ದೋಣಿಹಾಕ ಪೊನ್ನಪ್ಪನೇ ಆಸರೆ. ಗೌಂಡಗಾಂವ ಆಂಧ್ರಕ್ಕೆ ಸೇರಿದ್ದರೂ ಅಲ್ಲಿ ಕನ್ನಡ ಭಾಷಾ ಪ್ರೀತಿ ಹೆಚ್ಚು. ತೆಲುಗು ಜೊತೆಗೆ ಕನ್ನಡ ಮಾಧ್ಯಮ ಶಾಲೆ ಇದ್ದರೂ ಕನ್ನಡ ಪುಸ್ತಕಗಳು ಹಾಗೂ ಶಿಕ್ಷಕರ ಕೊರತೆ ವ್ಯಾಪಕವಾಗಿದೆ. ಕನ್ನಡ ಶಾಲೆಗಳಿಗೆ ಹೆಚ್ಚಿನ ಒತ್ತು ಸಿಗುತ್ತಿಲ್ಲ. ಹಾಗಾಗಿ ಪರ ರಾಜ್ಯದ ಮಕ್ಕಳು ಕನ್ನಡ ಕಲಿಯಬೇಕಿದ್ದರೆ, ಕರ್ನಾಟಕಕ್ಕೇ ಬರಬೇಕು.
ನಯಾ ಪೈಸೆ ಪಡೆಯೋಲ್ಲ: ಆಂಧ್ರದ ಗೌಂಡಗಾಂವನಿಂದ ರಾಜ್ಯದ ಗಡಿಯಂಚಿನಲ್ಲಿರುವ ಶ್ರೀಮಂಡಲ ಗ್ರಾಮಕ್ಕೆ ಪ್ರತಿ ದಿನ 25ಕ್ಕೂ ಹೆಚ್ಚು ಮಕ್ಕಳು ಕನ್ನಡ ಕಲಿಯಲು ಬರುತ್ತಾರೆ. ಈ ಮಕ್ಕಳನ್ನು ದೋಣಿಯಲ್ಲಿ ಬೆಳಗ್ಗೆ ಕರೆತಂದು ಸಂಜೆ ವಾಪಸ್ ಬಿಡುವ ಪೊನ್ನಪ್ಪ ವಿದ್ಯಾರ್ಥಿಗಳಿಂದ ನಯಾ ಪೈಸೆ ಪಡೆಯುವುದಿಲ್ಲ. ಕನ್ನಡ ಕಲಿಕೆಗೆ ಆಸರೆ ಆಗುತ್ತಿರುವ ಅಜ್ಜನನ್ನು ಕಂಡರೆ ಶಾಲಾ ಮಕ್ಕಳಿಗೆ ಎಲ್ಲಿಲ್ಲದ ಪ್ರೀತಿ-ವಿಶ್ವಾಸ. ದೋಣಿ ವಿಹಾರದ ಖುಷಿ ನೀಡುವುದರ ಜೊತೆ ನದಿ ನೀರಿನ ಬಗ್ಗೆ ಧೈರ್ಯ ತುಂಬುತ್ತಾರೆ ಪೊನ್ನಪ್ಪ. ಸಾಹಸದ ಕಥೆ ಹೇಳುತ್ತ ಕರೆತರುವ ಅಜ್ಜ ನಮಗೆಲ್ಲರಿಗೂ ಪಂಚಪ್ರಾಣ ಎನ್ನುತ್ತಾನೆ ಆಂಧ್ರದ ವಿದ್ಯಾರ್ಥಿ ಸ್ಟೀಫನ್.
ವ್ಯಾಪಾರ, ಆಸ್ಪತ್ರೆಗೂ ಶ್ರೀಮಂಡಲವೇ ಗತಿ: ಗೌಂಡಗಾಂವ ಗ್ರಾಮಸ್ಥರು ಶಾಲೆಗೆ ಮಾತ್ರವಲ್ಲ, ಆಹಾರ ಸಾಮಗ್ರಿಗಳಿಗೂ ಶ್ರೀಮಂಡಲವನ್ನೇ ಅವಲಂಬಿಸಿದ್ದಾರೆ. ಎಲ್ಲರಿಗೂ ದೋಣಿಯೇ ಸೇತುವೆ. ಗರ್ಭಿಣಿಯರೂ ಆಸ್ಪತ್ರೆಗೆ ಶ್ರೀಮಂಡಲಕ್ಕೇ ಬರಬೇಕು. ದೋಣಿಯನ್ನೇ ಆಶ್ರಯಿ ಸಬೇಕು. ಗೌಂಡಗಾಂವಗೆ ಬೀದರ್ 80 ಕಿ.ಮೀ. ದೂರ. ಶ್ರೀಮಂಡಲದ ಮೂಲಕ ಬಂದರೆ ಕೇವಲ 13 ಕಿ.ಮೀ. ದೂರ. ಹೀಗಾಗಿ ಬೀದರ್‌ಗೆ ಹೋಗುವವರು ಶ್ರೀಮಂಡಲದ ಮೂಲಕವೇ ಹೋಗು ತ್ತಾರೆ. ಮಕ್ಕಳನ್ನು ಉಚಿತವಾಗಿ ದಾಟಿಸುವ ಪೊನ್ನಪ್ಪ, ಬೇರೆಯವರಿಂದ 5 ರೂ. ಹಣ ಪಡೆಯುತ್ತಾರೆ.
ಶಶಿಕಾಂತ ಬಂಬುಳಗೆ
source:http://kannada.yahoo.com/%E0%B2%86-%E0%B2%A7-%E0%B2%B0%E0%B2%A7-%E0%B2%AE%E0%B2%95-%E0%B2%95%E0%B2%B3-%E0%B2%97-%E0%B2%AC-%E0%B2%A6%E0%B2%B0-174206325.html
No comments:
Post a Comment