Sunday, January 6, 2013

ಬೀದರನಲ್ಲಿ ಹಾಕಿ ಅಕಾಡೆಮಿ ಸ್ಥಾಪನೆ

ನಶಿಸಿ ಹೋಗುತ್ತಿರುವ ರಾಷ್ಟ್ರೀಯ ಕ್ರೀಡೆ ಹಾಕಿಯನ್ನು ಉಳಿಸಿ ಬೆಳೆಸುವ ಉದ್ದೇಶದಿಂದ ಬೀದರನಲ್ಲಿ ಕರ್ನಾಟಕ ಹಾಕಿ ಅಕಾಡೆಮಿ ಸ್ಥಾಪಿಸಲು ಉದ್ದೇಶಿಸಲಾಗಿದೆ ಎಂದು ಎನ್‌ಐಎಸ್‌ ಹಾಕಿ ತರಬೇತಿದಾರ, ಮಧ್ಯಪ್ರದೇಶ ಹಾಕಿ ಅಕಾಡೆಮಿ ಸಂಸ್ಥಾಪಕ ರಾಜಕುಮಾರ ಚೌಬೆ ಹೇಳಿದರು. ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉತ್ತರ ಕರ್ನಾಟಕದಲ್ಲಿ ರಾಷ್ಟ್ರೀಯ ಆಟ ಹಾಕಿ ಅವಸಾನದಲ್ಲಿದೆ. ದಕ್ಷಿಣ ಕರ್ನಾಟಕ ಭಾಗಕ್ಕೆ ಮಾತ್ರ ಆಟ ಸೀಮಿತವಾಗಿದೆ. ಕೇವಲ ಆ ಭಾಗದ ಕ್ರೀಡಾಪಟುಗಳು ಮಾತ್ರ ಹಾಕಿ ಕ್ರೀಡೆಯಲ್ಲಿ ಭಾಗವಹಿಸುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಹಾಕಿ ಕ್ರೀಡೆಗೆ ಬೀದರ ವಾತಾವರಣ ಪೂರಕವಾಗಿದೆ. ಈ ಹಿಂದೆ ಅನೇಕ ಸ್ಥಳೀಯ ಪ್ರತಿಭೆಗಳು ರಾಜ್ಯ, ರಾಷ್ಟ್ರ ಮಟ್ಟದವರೆಗೆ ಸಾಧನೆ ಮಾಡಿದ್ದರು. ಹೀಗಾಗಿ ಜಿಲ್ಲಾಡಳಿತ, ಜನಪ್ರತಿನಿಧಿಧಿಗಳು, ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಹಾಕಿ ಅಕಾಡೆಮಿ ಸ್ಥಾಪಿಸಲಾಗುವುದು. ಜೊತೆಗೆ ಹಿಂದಿನಂತೆ ಮತ್ತೆ ಈ ಭಾಗದಲ್ಲಿ ಹಾಕಿ ಕ್ರೀಡೆಯ ಜನಪ್ರಿಯತೆ ಹೆಚ್ಚಿಸಲು ಪ್ರಯತ್ನಿಸಲಾಗುವುದು ಎಂದು ಹೇಳಿದರು. ಮಧ್ಯಪ್ರದೇಶದ ಜಬಲಪುರ, ಭೂಪಾಲನ ನರ್ಸಿಂಗ್‌ಪುರ ಜಿಲ್ಲೆಗಳಲ್ಲಿ ಹಾಕಿ ಅಕಾಡೆಮಿ ಸ್ಥಾಪಿಸಿ, ಅಲ್ಲಿಯ ಯುವಕರಿಗೆ ಹಾಕಿ ತರಬೇತಿ ನೀಡಿದ್ದೇನೆ. ಎರಡು ವರ್ಷಗಳ ತರಬೇತಿಯಲ್ಲಿ ಅಕಾಡೆಮಿಯಿಂದ 18 ಹಾಕಿ ಪಟುಗಳು ರಾಷ್ಟ್ರ ಮಟ್ಟದಲ್ಲಿ ಭಾಗವಹಿಸಿದ್ದಾರೆ. ಕ್ರೀಡಾಕೂಟದಲ್ಲಿ ಭಾಗವಹಿಸಿದ 16ಜನ ಸರ್ಕಾರಿ ಹುದ್ದೆ ಪಡೆದಿದ್ದಾರೆ ಎಂದರು. ಬೀದರನಲ್ಲಿಯೂ ಕರ್ನಾಟಕ ಹಾಕಿ ಅಕಾಡೆಮಿ ಸ್ಥಾಪಿಸಿ, ತರಬೇತಿ ನೀಡಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಡುವಂತೆ ಹಾಕಿ ಆಟಗಾರರನ್ನು ತಯಾರು ಮಾಡುತ್ತೇನೆ. ಜಿಲ್ಲೆಯ ಪರಿಶಿಷ್ಟ ಜಾತಿ, ಮುಸ್ಲಿಂ ಹಾಗೂ ಪಂಜಾಬಿ ಸಮುದಾಯದ ಅನಾಥ, ಬಡ ಕುಟುಂಬದ ವಿದ್ಯಾರ್ಥಿಗಳನ್ನು ಹಾಕಿ ಪಟುಗಳನ್ನಾಗಿ ಮಾಡಲು ದತ್ತು ತೆಗೆದುಕೊಳ್ಳಲು ನಿರ್ಧರಿಸಿದ್ದೇನೆ. ಇದರಿಂದ ಅಂಥ ಮಕ್ಕಳ ಬದುಕು ಹಸನಾಗುವುದಲ್ಲದೆ, ಸರ್ಕಾರಿ ಹುದ್ದೆ ಸಿಗುವ ಸಾಧ್ಯತೆಗಳಿವೆ ಎಂದರು. ಬೀದರಿನಲ್ಲಿ ಮೂರು ಹಾಕಿ ಗ್ರೌಂಡ್‌ಗಳಿವೆ. ಅಲ್ಲಿ 200 ಹಾಕಿ ಆಟಗಾರರಿಗೆ ತರಬೇತಿ ನೀಡಬಹುದು. 8ರಿಂದ 16ವರ್ಷದ ವರೆಗಿನ ಬಾಲಕ ಬಾಲಕಿಯರು ತರಬೇತಿಗೆ ಅರ್ಹರು. ಇಲ್ಲಿಯ ಮಿಷನ್‌ ಸ್ಕೂಲ್‌ ಅನಾಥಾಲಯದ 60 ವಿದ್ಯಾರ್ಥಿಗಳು, ಕ್ರೀಡಾ ಇಲಾಖೆ ವಸತಿ ನಿಲಯದ 100 ವಿದ್ಯಾರ್ಥಿಗಳು, ಗುರುನಾನಕ ಟ್ರಸ್ಟ್‌ ಸೇವಕರ 64 ಮಕ್ಕಳಿಗೆ ಹಾಕಿ ಆಟದ ತರಬೇತಿ ನೀಡಲು ಉದ್ದೇಶಿಸಲಾಗಿದೆ ಎಂದು ಹೇಳಿದರು. ಬಡ ವಿದ್ಯಾರ್ಥಿಗಳಿಗೆ ಉಚಿತ ಹಾಕಿ ತರಬೇತಿ, ಬ್ಯಾಲೆನ್ಸ್‌ ಡಾಯಿಟ್‌ ನೀಡಲಾಗುವುದು. ಜತೆಗೆ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ವೈದ್ಯಕೀಯ ಚಿಕಿತ್ಸೆಯನ್ನು ಉಚಿತವಾಗಿ ನೀಡಲು ಕ್ರಮ ಕೈಗೊಳ್ಳಲಾಗುವುದು. ಅಕಾಡೆಮಿಯಿಂದ ಶಿಕ್ಷಣಕ್ಕೆ ನೆರವು ನೀಡುವ ಪ್ರಯತ್ನ ಮಾಡಲಾಗುವುದು. ಇದಕ್ಕಾಗಿ ಕರ್ನಾಟಕ ಹಾಕಿ ಸಂಘ, ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯ ಅಧಿಧಿಕಾರಿಗಳು ಹೆಚ್ಚು ಗಮನ ಹರಿಸಬೇಕು ಎಂದರು

source:http://kannada.yahoo.com/%E0%B2%AC-%E0%B2%A6%E0%B2%B0%E0%B2%A8%E0%B2%B2-%E0%B2%B2-%E0%B2%B9-%E0%B2%95-%E0%B2%85%E0%B2%95-%E0%B2%A1-%E0%B2%AE-110220451.html;_ylt=AriknE6IVPj16FH3_Jjfrnnupe5_;_ylu=X3oDMTRiM2Y4aWs0BG1pdANCaWRhciBNb2R1bGUgU3RvcnlsaXN0BHBrZwNiYTI5OWNiOC02MDAyLTM3NzctYjYyNC0wMTJjZjRlNDczN2MEcG9zAzUEc2VjA01lZGlhU3RvcnlMaXN0TFBUZW1wBHZlcgM4YWI2MGI1MC01N2YwLTExZTItYjc1Yi01ODA0MzU1YTdkNjI-;_ylg=X3oDMTJzYm02M3ZnBGludGwDaW4EbGFuZwNrbi1pbgRwc3RhaWQDBHBzdGNhdAPgsrjgs4Hgsqbgs43gsqbgsr984LKc4LK_4LKy4LON4LKy4LOG4LKX4LKz4LOBBHB0A3NlY3Rpb25z;_ylv=3

No comments:

Post a Comment