Tuesday, December 18, 2012

ಉ.ಕರ್ನಾಟಕ ಜನತೆ ಫುಲ್ ಖುಷ್: ಕಲಂ 371 ಗೆ ಸಂಸತ್ ಅಸ್ತು

ಉತ್ತರ ಕರ್ನಾಟಕ ಜನತೆಯ ನಾಲ್ಕು ದಶಕಗಳ ಕನಸು ಇಂದು ನನಸಾಗುವ ಮೂಲಕ ರಾಜ್ಯದಾದ್ಯಂತ ಅದರಲ್ಲೂ ಉತ್ತರ ಕರ್ನಾಟಕ ಭಾಗದ ಜನತೆ ಸಂಭ್ರಮಾಚರಣೆಯಲ್ಲಿ ತೊಡಗುವಂತೆ ಮಾಡಿದೆ.

ಇಂದು ಲೋಕಸಭೆಯಲ್ಲಿ ಉತ್ತರ ಕರ್ನಾಟಕದ ಅಭಿವೃದ್ಧಿ ಕುರಿತಾದ ಕಲಂ 371 ತಿದ್ದುಪಡಿ ಮಸೂದೆ ಅಂಗೀಕಾರವಾಗುವ ಮೂಲಕ ಅಭಿವೃದ್ಧಿ ವಿಚಾರದಲ್ಲೂ ನಿರ್ಲಕ್ಷ್ಯಕ್ಕೊಳಗಾಗಿದ್ದೇವೆಂಬ ಭಾವನೆಯಲ್ಲಿದ್ದ ಉತ್ತರ ಕರ್ನಾಟಕದ ಜನತೆಗೆ ಸಮಾಧಾನದ ನಿಟ್ಟುಸಿರು ಬಿಡುವಂತೆ ಮಾಡಿದೆ.

ಮಸೂದೆ ಅಂಗೀಕಾರವಾಗುವ ಹಂತದಲ್ಲಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ನೇತೃತ್ವದ ರಾಜ್ಯ ಸರಕಾರ, ಕೇಂದ್ರ ಸರಕಾರಕ್ಕೆ ಪತ್ರಬರೆದು ಮಸೂದೆ ಕುರಿತು ನನ್ನ ಅಭಿಪ್ರಾಯ ಕೇಳಿಲ್ಲವೆಂದು ತಗಾದೆ ತೆಗೆದಿದ್ದ ಹಿನ್ನಲೆಯಲ್ಲಿ ಚಳಿಗಾಲದ ಅಧಿವೇಶನದಲ್ಲಿ ಅಂಗೀಕಾರಗೊಳ್ಳುವುದೋ ಇಲ್ಲವೋ ಎನ್ನುವ ಆತಂಕ ಉತ್ತರ ಕರ್ನಾಟಕದ ಜನತೆಯನ್ನು ಕಾಡಿತ್ತು. ರಾಜ್ಯ ಸರಕಾರದ ಕ್ರಮಕ್ಕೆ ತೀವ್ರ ಆಕ್ರೋಶವಾಗಿತ್ತಲ್ಲದೇ ಪ್ರತ್ಯೇಕ ರಾಜ್ಯದ ಕೂಗು ಕೇಳಿ ಬಂದಿತ್ತು.

ಜನತೆಯ ಆಕ್ರೋಶದಿಂದ ಎಚ್ಚೆತ್ತುಗೊಂಡ ರಾಜ್ಯ ಸರಕಾರ ತಕ್ಷಣವೆ ಕೇಂದ್ರಕ್ಕೆ ಪತ್ರ ಬರೆದು, ಪ್ರಸಕ್ತ ಅಧಿವೇಶನದಲ್ಲಿಯೇ ಮಸೂದೆ ಅಂಗೀಕಾರಕ್ಕೆ ಮನವಿ ಮಾಡಿದ್ದಲ್ಲದೇ ಆಕ್ಷೇಪಣೆಯನ್ನು ಹಿಂದಕ್ಕೆ ಪಡೆದಿತ್ತು.

ಅದರಂತೆ, ಇಂದು ಲೋಕಸಭೆಯಲ್ಲಿ ಕಲಂ 371(ಡಿ) ಮಸೂದೆ ಮಂಡನೆಯಾದ ವೇಳೆ ಮಸೂದೆ ಪರವಾಗಿ 342 ಮತಗಳು ಬಂದವು ವಿರೋಧವಾಗಿ ಇತರ ಪಕ್ಷಗಳು ಕೂಡಾ ಮತ ಚಲಾಯಿಸದಿರುವುದು ವಿಶೇಷವಾಗಿತ್ತು.

ಕಲಂ 371(ಡಿ) ಮಸೂದೆ ಜಾರಿಯಿಂದಾಗಿ ಉತ್ತರ ಕರ್ನಾಟಕ ಭಾಗಕ್ಕೆ ಕೇಂದ್ರ ಸರಕಾರದಿಂದ ವಿಶೇಷ ಅನುದಾನ ದೊರೆಯುವುದಲ್ಲದೇ ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿ ದೊರೆಯಲಿದೆ.


Source:http://kannada.webdunia.com/newsworld/news/national/1212/18/1121218032_1.htm