Saturday, August 18, 2012

ಆಗಸ್ಟ್ 24ರಂದು ಬೀದರ್ ಬಂದ್.

ಬೆಂಗಳೂರು -ಬೀದರ್ ನಡುವಣ ರೈಲು ಮಾರ್ಗದ ಸಂಚಾರದ ವೇಳೆ ಬದಲಾವಣೆ ಸೇರಿದಂತೆ ವಿವಿಧ ಬೇಡಿಕೆಗಳಿಗೆ ಸ್ಪಂದಿಸಲು ಜನಪ್ರತಿನಿಧಿಗಳು ವಿಫಲವಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿರುವ ವಿವಿಧ ಸಂಘಟನೆಗಳು, ಈ ಕುರಿತು ಸರ್ಕಾರದ ಗಮನಸೆಳೆಯಲು ಇದೇ 24ರಂದು ಬೀದರ್ ಬಂದ್‌ಗೆ ಕರೆ ನೀಡಿವೆ.

`ಸಂಸದರು, ಶಾಸಕರು, ಸರ್ಕಾರ ಎಲ್ಲರಿಗೂ ಪತ್ರ ಬರೆದು ಸಾಕಾಯಿತು. ಆ ಕ್ಷಣಕ್ಕೆ ಭರವಸೆ ನೀಡಿದರೂ ನಂತರ ಮರೆಯತ್ತಿದ್ದಾರೆ. ರೈಲು ಸಂಚಾರದ ವೇಳೆ ಬದಲಿಸುವುದರಿಂದ ಬೆಂಗಳೂರಿಗೆ ತೆರಳುವ ಅಸಂಖ್ಯ ಪ್ರಯಾಣಿಕರಿಗೆ ನೆರವಾಗಲಿದೆ` ಎಂದು ವಿವಿಧ ಸಂಘಟನೆಗಳ ಪ್ರತಿನಿಧಿಗಳ ಪರವಾಗಿ ಬಿ.ಜಿ.ಶೆಟಗಾರ್ ಗುರುವಾರ ತಿಳಿಸಿದರು.

ಬೀದರ್ ವಾಣಿಜ್ಯ ಮತ್ತುಕೈಗಾರಿಕಾ ಸಂಸ್ಥೆಯ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ವಿವಿಧ ಸಂಘಟನೆಗಳ ಪ್ರತಿನಿಧಿಗಳು ಭಾಗವಹಿಸಿದ್ದರು. ಬಂದ್ ನಡೆಸಬೇಕು ಎಂದು ಎಲ್ಲರೂ ಒಟ್ಟಾಗಿ ತೀರ್ಮಾನ ಕೈಗೊಂಡಿದ್ದೇವೆ. ಬಂದ್ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವಂತೆ ಸಂಸದರು, ಶಾಸಕರಿಗೂ ಮನವಿ ಮಾಡಲಿದ್ದೇವೆ ಎಂದು ತಿಳಿಸಿದರು.

ಬೀದರ್- ಬೆಂಗಳೂರು ನಡುವಣ ರೈಲು ಈಗಿನ ಅಪರಾಹ್ನ 12 ಗಂಟೆಯ ಬದಲಿಗೆ ಸಂಜೆ 5 ಗಂಟೆ ವೇಳೆಗೆ ಬೀದರ್‌ನಿಂದ ನಿರ್ಗಮಿಸುವಂತೆ ಸಮಯ ಬದಲಿಸಬೇಕು; ಬಜೆಟ್‌ನಲ್ಲಿ ಪ್ರಕಟಿಸಿರುವಂತೆ ಬೀದರ್ ಮತ್ತು ಹೈದರಾಬಾದ್ ನಡುವಣ ಇಂಟರ್‌ಸಿಟಿ ಎಕ್ಸ್‌ಪ್ರೆಸ್ ರೈಲು ಸಂಚಾರ ಆರಂಭಿಸಬೇಕು; ಬೀದರ್-ಗುಲ್ಬರ್ಗ ರೈಲು ಮಾರ್ಗ ನಿರ್ಮಾಣ ಕಾರ್ಯವನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಬೇಕು ಎಂಬುದು ಸಂಘಟನೆಗಳ ಪ್ರಮುಖ ಬೇಡಿಕೆಯಾಗಿವೆ.

ಬೆಂಗಳೂರಿಗೆ ಜಿಲ್ಲೆಯಿಂದ ನಿತ್ಯ ಸರಾಸರಿ 500 ಜನರು ಪ್ರಯಾಣ ಬೆಳೆಸುತ್ತಿದ್ದಾರೆ. ರೈಲು ಮಾರ್ಗದ ಬದಲಾವಣೆ ಆದರೆ ನೆರವಾಗಲಿದೆ. ಅಲ್ಲದೆ, ಅಧಿಕಾರಿಗಳು ಜಿಲ್ಲೆಗೆ ಭೇಟಿ ನೀಡಲು ಇದು ನೆರವಾಗಲಿದೆ. ರೈಲು ಸಂಚಾರದ ಅವಧಿ ಹೆಚ್ಚಾಗಿದೆ ಮತ್ತು ಬಸ್‌ನಲ್ಲಿ ಪ್ರಯಾಣಿಸುವುದು ಕಷ್ಟ ಎಂಬ ಕಾರಣದಿಂದಲೇ ಅನೇಕ ಅಧಿಕಾರಿಗಳೂ ಬರುತ್ತಿಲ್ಲ ಎಂದು ವ್ಯಾಖ್ಯಾನಿಸಿದರು.

ಭಿನ್ನ ದನಿ: ಆದರೆ, ಪ್ರತಿಭಟನೆಗೆ ರಾಜಕಾರಣಿಗಳನ್ನು ಆಹ್ವಾನಿಸಬೇಕು ಎಂಬ ಸಲಹೆಗೆ ವಿವಿಧ ಸಂಘಟನೆಗಳ ಪ್ರತಿನಿಧಿಗಳಲ್ಲೇ ಭಿನ್ನದನಿ ವ್ಯಕ್ತವಾಯಿತು. ರಾಜಕಾರಣಿಗಳು ಬಂದರೆ ಪ್ರತಿಭಟನೆ ಇನ್ನಷ್ಟು ಯಶಸ್ಸಾಗುತ್ತದೆ ಎಂಬ ಅಭಿಪ್ರಾಯವನ್ನುಕೆಲವರು ವ್ಯಕ್ತಪಡಿಸಿದರು. ಇದಕ್ಕೆ ಶೆಟಗಾರ್ ಅವರೂ ದನಿಗೂಡಿಸಿದರು.

ಇನ್ನೊಂದೆಡೆ, ಈ ಸಮಸ್ಯೆಗಳು ಬಗೆಹರಿಯದೇ ಉಳಿಯಲು ರಾಜಕಾರಣಿಗಳೇ ಕಾರಣ. ಅವರಿಗೆ ಇದರತ್ತ ಆಸಕ್ತಿ ಇಲ್ಲವಾಗಿದೆ. ಒಂದು ರೀತಿ ಈಪ್ರತಿಭಟನೆಯೂ ಅವರ ವಿರುದ್ಧವೇ ಆಗಿರುವ ಕಾರಣ ಅವರನ್ನು ಆಹ್ವಾನಿಸುವ ಅಗತ್ಯವಿಲ್ಲ ಎಂಬ ಅಭಿಪ್ರಾಯ ಇನ್ನೂ ಕೆಲವರಿಂದ ವ್ಯಕ್ತವಾಯಿತು.

ಅನಿಲ್ ಬೆಲ್ದಾಳ್, ಪಂಡಿತ್ ಚಿದ್ರಿ, ಶ್ರೀಕಾಂತ ಸ್ವಾಮಿ, ವಿಜಯ್‌ಕುಮಾರ್ ಸೋನಾರೆ, ಶಶಿಧರ್ ಕೊಸಂಬೆ, ಕಾಶಿನಾಥ ಧನ್ನೂರ, ಓಮರೆಡ್ಡಿ, ಸುಮಿತ ಸಿಂಧೋಳ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳು ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.







source: http://prajavani.net/include/story.php?news=93167&section=111&menuid=10

No comments:

Post a Comment