ಬೀದರ್ ಐತಿಹಾಸಿಕ ಕೋಟೆ ಆವರಣದಲ್ಲಿ ಲಾನ್ ಅಭಿವೃದ್ಧಿ ಕಾರ್ಯ ನಡೆಯುತ್ತಿದೆ
ಬೀದರ್: ನಗರದ ಐತಿಹಾಸಿಕ, ಪರಂಪರೆಯನ್ನು ಯುವ ಪೀಳಿಗೆ ಮತ್ತು ಪ್ರವಾಸಿಗರಿಗೆ ಪ್ರಚುರ ಪಡಿಸುವ ಕೆಲಸ ಈಗ ತುಸು ವೇಗ ಪಡೆದಿದ್ದು, ಇದರ ಭಾಗವಾಗಿ ಕೋಟೆ ಅಂಗಳಕ್ಕೆ ಹಸಿರು ಹೊದಿಕೆ ಹೊದಿಸುವ ಕಾರ್ಯ ನಡೆದಿದೆ. ನಗರಕ್ಕೆ ಭೇಟಿ ನೀಡುವ ಪ್ರವಾಸಿಗಳಿಗೆ ಕೋಟೆ ಮೊದಲ ಆಕರ್ಷಣೆ. ಬಹಮನಿ ಆಡಳಿತ ಅವಧಿಯಲ್ಲಿ ನಿರ್ಮಾಣವಾದ ಈ ವಿಶಾಲ ಕೋಟೆ ವೀಕ್ಷಣೆಗೆ ಬರುವ ಪ್ರವಾಸಿಗರ ದೃಷ್ಟಿಯಲ್ಲಿ, ಕೋಟೆ ಅಂಗಳವನ್ನು ಸುಂದರವಾಗಿಸುವುದು, ಅವರಿಗೆ ಆಹ್ಲಾದಕರ ಅನುಭವ ಮೂಡಿಸುವುದು ಇದರ ಉದ್ದೇಶ.
ಕೋಟೆ ಪ್ರವೇಶದ ಆರಂಭದಲ್ಲಿಯೇ ಇದ್ದ, ವಿಸ್ತಾರವಾದ ಪ್ರದೇಶದಲ್ಲಿ ಲಾನ್ ಅಭಿವೃದ್ಧಿ ಕಾರ್ಯ ನಡೆದಿದೆ. ಪುರಾತತ್ವ ಮತ್ತು ಸರ್ವೇಕ್ಷಣಾ ಇಲಾಖೆಯ ಸುಪರ್ದಿಯಲ್ಲಿ ಈ ಕೋಟೆ ಇದ್ದು, ಸದ್ಯ ಸುಮಾರು ₨ 4 ಲಕ್ಷ ವೆಚ್ಚದಲ್ಲಿ ಲಾನ್ ಅಭಿವೃದ್ಧಿ ಪಡಿಸುವ ಕಾರ್ಯ ನಡೆದಿದೆ.
ಈಗ ನೀರು ಹರಿವಿನ ಪೈಪು, ಹೆಚ್ಚುವರಿ ಮಣ್ಣು ತುಂಬಿಸಿ, ಭೂಮಿ ಹದ ಕಾರ್ಯ ಸಾಗಿದ್ದು, ಇದರ ಮೇಲೆ ಹಸಿರು ಹುಲ್ಲಿನ ಹಾಸು ಹೊದೆಯಲಾಗುತ್ತದೆ. ಪ್ರವೇಶದ ಆರಂಭದಲ್ಲೇ ಕೋಟೆ ಬಗೆಗೆ ಪ್ರವಾಸಿಗರಲ್ಲಿ ಆಸಕ್ತಿ ಬೆಳೆಸುವುದು ಮತ್ತು ಸ್ಥಳ ವ್ಯರ್ಥವಾಗಿಸದೇ ಆಕರ್ಷಕ ಗೊಳಿಸುವುದು ಇದರ ಉದ್ದೇಶ. ಒಂದು ತಿಂಗಳಲ್ಲಿ ಈ ಕಾರ್ಯ ಪೂರ್ಣಗೊಳ್ಳುವ ನಿರೀಕ್ಷೆಯಿದೆ’ ಎನ್ನುತ್ತಾರೆ ಪುರಾತತ್ವ ಮತ್ತು ಸರ್ವೇಕ್ಷಣಾ ಇಲಾಖೆಯ ಅಧಿಕಾರಿ ಮೌನೇಶ್ ಕುರುವತ್ತಿ ಅವರು.
‘ಲಾನ್ ಅಭಿವೃದ್ಧಿ ಬಳಿಕ ನಿರ್ವಹಣೆಗೆ ಪೂರಕವಾಗಿ ಸುತ್ತಾ ಗ್ರಿಲ್ ಹಾಕಲಿದ್ದು, ಶೀಘ್ರವೇ ಕೇಂದ್ರ ಕಚೇರಿಗೆ ಪ್ರಸ್ತಾಪ ಕಳುಹಿಸಲಾಗುವುದು. ಧಾರವಾಡದಿಂದ ಈಚೆಗೆ ನಗರಕ್ಕೆ ಆಗಮಿಸಿದ್ದ ಇಲಾಖೆಯ ಹಿರಿಯ ಅಧಿಕಾರಿ ಸುಬ್ರಹ್ಮಣ್ಯ ಅವರಿಗೂ ಇದನ್ನು ಮನವರಿಕೆ ಮಾಡಲಾಗಿದೆ’ ಎಂದು ಹೇಳಿದರು.
ಸಂಗ್ರಹಾಲಯ ಸ್ಥಳಾಂತರ: ಪ್ರವಾಸಿಗರಿಗೆ ಇತಿಹಾಸದ ಪರಿಚಯ ಮಾಡಿಸಲು ಕೋಟೆ ಆವರಣದ ಹಳೇ ಡಿ.ಸಿ. ಕಚೇರಿ ಕಟ್ಟಡಕ್ಕೆ ಸಂಗ್ರಹಾಲಯವನ್ನು ಸ್ಥಳಾಂತರ ಮಾಡುವ ಪ್ರಕ್ರಿಯೆಯೂ ಸಾಗಿದೆ. ಈ ಕಾರ್ಯ ಜನವರಿ ವೇಳೆಗೆ ಮುಗಿಯಬಹುದು. ವೀಕ್ಷಕರಿಗೆ ಆರಂಭದಲ್ಲೇ ಈ ನೆಲದ ಇತಿಹಾಸದ ಪರಿಚಯ ಆಗಲಿದೆ. ತದನಂತರ ಕೋಟೆಯಲ್ಲಿರುವ ತರ್ಕಶ್ ಮಹಲ್‌್, ಗಗನ್ ಮಹಲ್, ದಿವಾನೇ ಆಮ್, ದೀವಾನೇ ಕಾಸ್ ಇತರ ಸ್ಥಳ ವೀಕ್ಷಿಸುವುದರಿಂದ ಇತಿಹಾಸದ ಮನವರಿಕೆ ಆಗಬಹುದು.
ಈಗ ಸಾರ್ವಜನಿಕರಿಗೆ ಕೋಟೆ ವೀಕ್ಷಣೆಗೆ ಕೆಲ ನಿರ್ಬಂಧವಿದೆ. ‘ಇದು, ಸಂರಕ್ಷಿತ ಪಾರಂಪರಿಕ ತಾಣ ಆಗಿರುವ ಕಾರಣ ಕೆಲವೆಡೆ ಪ್ರವೇಶ ನಿರ್ಬಂಧಿಸಿ, ಬೀಗ ಹಾಕಿರುವುದು ನಿಜ. ಆದರೆ, ಆಸಕ್ತ ಪ್ರವಾಸಿಗರು ಕಚೇರಿ ಸಂಪರ್ಕಿಸಿ ಕೇಳಿದರೆ ವೀಕ್ಷಣೆಗೆ ಅವಕಾಶ ನೀಡಲಾಗುವುದು’ ಎಂದು ಮೌನೇಶ್ ಪ್ರತಿಕ್ರಿಯಿಸಿದರು.
ಗೋ ಯುನೆಸ್ಕೋ, ಡೆಕ್ಕನ್ ಹೆರಿಟೇಜ್ ಫೌಂಡೇಷನ್, ಇಂಡಿಯನ್ ಹೆರಿಟೇಜ್ ಸಿಟಿ ಸಂಸ್ಥೆಗಳು ಬೀದರ್‌ನತ್ತ ಆಸಕ್ತಿ ವಹಿಸಿದ್ದು, ಪ್ರವಾಸಿ ತಾಣವಾಗಿ ಅಭಿವೃದ್ಧಿ ಪಡಿಸುವ ಜಿಲ್ಲಾಡಳಿತ ಕಾರ್ಯಕ್ಕೆ ಕೈಜೋಡಿಸಿವೆ. ಈಚೆಗೆ ಕರ್ನಾಟಕ ಟೂರಿಸಂ ಫೋರಂನ ಸದಸ್ಯರು ಕೂಡಾ ಜಿಲ್ಲೆಗೆ ಭೇಟಿ ನೀಡಿ, ಪ್ರವಾಸಿಗಳ ನಡುವೆ ಸಂಪರ್ಕ, ಸಂವಹನ ಉತ್ತಮ ಪಡಿಸುವ ಚಿಂತನೆ ಹರಿಬಿಟ್ಟಿದ್ದಾರೆ.
ಈ ಎಲ್ಲ ಕ್ರಮಗಳು ನಿರೀಕ್ಷಿತ ಫಲ ನೀಡಿದರೆ, ಪಾರಂಪರಿಕ ಇತಿಹಾಸ ಕೋಟೆಯ ಆಚೆಗೂ ತಲುಪಿ, ಜಿಲ್ಲೆಯಲ್ಲಿ ಪ್ರವಾಸೋದ್ಯಮದ ಅಭಿವೃದ್ಧಿ ಕಾರ್ಯ ಸರಾಗವಾಗಬಹುದು.
No comments:
Post a Comment