Friday, November 21, 2014

ಉಬ್ಬು ಶಿಲ್ಪಕಲೆಯಲ್ಲಿ ಇತಿಹಾಸ ಲೇಪನ





ಬೀದರ್‌: ಜಿಲ್ಲೆಯ ಸಂಸ್ಕೃತಿ ಮತ್ತು ಪರಂಪರೆಯ ಜೊತೆಗೇ ಬೆಸೆದುಕೊಂಡಿರುವ ಐತಿಹಾಸಿಕ ಘಟನೆಗಳು, ಸಂಗತಿಗಳನ್ನು ಸಿಮೆಂಟ್‌ ಉಬ್ಬು ಚಿತ್ರಗಳ ಮೂಲಕ ಗೋಡೆಯ ಮೇಲೆ ಲೇಪನ ಮಾಡುವ ಯತ್ನ ನಗರದಲ್ಲಿ ಈಗ ನಡೆದಿದೆ.

ಜಿಲ್ಲೆಯ ಇತಿಹಾಸ, ಪರಂಪರೆ ಉಲ್ಲೇಖಿ­ಸುವಾಗ ದಾಖಲಿಸಲೇಬೇಕಾದ ಸಂಗತಿಗಳನ್ನು ಒಳ­ಗೊಂಡ ಈ ಚಿತ್ರರೂಪಕ 12 ಸಾವಿರ ಚದರ ಅಡಿ ವಿಸ್ತೀರ್ಣದಲ್ಲಿ ವ್ಯಾಪಿಸಲಿದೆ. ಬಹುಶಃ ತಿಂಗಳಲ್ಲಿ ಪೂರ್ಣಗೊಳ್ಳುವ ಈ ಕಾರ್ಯದಲ್ಲಿ ಸುಮಾರು 25 ಕಲಾವಿದರು ತೊಡಗಿ­ಕೊಂಡಿದ್ದಾರೆ.

ರಾಜಧಾನಿ ಬೆಂಗಳೂರಿಗೆ ಹೋದರೆ ಮೊದಲ ನೋಟಕ್ಕೆ ಗಮನ ಸೆಳೆಯುವುದು ಅಲ್ಲಿನ ಗೋಡೆಗಳು. ಬೆಂಗಳೂರು ಹಾಗೂ ವಿವಿಧ ಜಿಲ್ಲೆಗಳ ಪ್ರಮುಖ ತಾಣಗಳು ಚಿತ್ರಕಲೆ ರೂಪದಲ್ಲಿ ಅಲ್ಲಿನ ಗೋಡೆಗಳನ್ನು ಅಲಂಕರಿಸಿವೆ. ಅಂಥದೇ ಪ್ರೇರಣೆಯಲ್ಲಿ ಇಲ್ಲಿ ಸಿಮೆಂಟ್‌ ಉಬ್ಬು ಚಿತ್ರದಲ್ಲಿ ರೂಪಕ ಸಿದ್ಧವಾಗುತ್ತಿದೆ.

ನಗರದ ಕೇಂದ್ರ ಭಾಗದಲ್ಲಿ ಅಶೋಕಾ ಹೋಟೆಲ್‌ನಿಂದ ಬೊಮ್ಮಗೊಂಡೇಶ್ವರ ವೃತ್ತಕ್ಕೆ ಸಂಪರ್ಕ ಕಲ್ಪಿಸುವ, ಈಚೆಗೆ ನಿರ್ಮಾಣಗೊಂಡು, ಸಾರ್ವಜನಿಕ ಬಳಕೆಗೆ ಮುಕ್ತವಾಗಿದ್ದ ರೈಲ್ವೆ ಕೆಳ ಸೇತುವೆಯ ಉಭಯ ಗೋಡೆಗಳ ಮೇಲೆ ಈ ಕಾರ್ಯ ನಡೆದಿದೆ.

ಜಿಲ್ಲಾಡಳಿತ, ಸ್ಥಳೀಯ ರೋಟರಿ ಕ್ಲಬ್‌ ಸಹ­ಯೋಗದಲ್ಲಿ ಕರ್ನಾಟಕ ಶಿಲ್ಪಕಲಾ ಅಕಾಡೆಮಿ­ಯ ನೇತೃತ್ವದಲ್ಲಿ ಇದು ನಡೆದಿದ್ದು, ಬಹುಶಃ ಈ ಮಾಸಾಂತ್ಯಕ್ಕೆ ಮುಗಿಯುವ ನಿರೀಕ್ಷೆಯಿದೆ. ಮೂರು ಹಂತದಲ್ಲಿ ಈ ಉಬ್ಬು ಶಿಲ್ಪ ಕಲೆಗಳು ಮೂಡಲಿವೆ.

ಅಕಾಡೆಮಿಯ ಸದಸ್ಯ ಮಹೇಶ್‌ ತಲ್ವಾರ್ ಯೋಜನಾ ಸಂಯೋಜಕರಾಗಿ, ಈರಣ್ಣ ಕಮ್ಮಾರ ಶಿಬಿರದ ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದು, ಹಿರಿಯ ಕಲಾವಿದರಾದ ಗೋವರ್ಧನ್‌, ಗೌರಿ­ಶಂಕರ್, ರಾಮಚಂದ್ರ, ಬಡಿಗೇರ್‌ ಅವರ ನೇತೃತ್ವದಲ್ಲಿ 22 ಸಹಾಯಕ ಕಲಾವಿದರು ಸಿಮೆಂಟ್ ಉಬ್ಬು ಶಿಲ್ಪ ನಿರ್ಮಿಸುತ್ತಿದ್ದಾರೆ.

ಮೊದಲ ಹಂತದಲ್ಲಿ 8ರಿಂದ 12ನೇ ಶತಮಾನದ ಘಟನೆಗಳನ್ನು ನೆನಪಿಸುವ ಬುದ್ಧವಿಹಾರ, ಕಲಾವಿದರಿಗೆ ಬೆಂಬಲಿಸುವ ರಾಷ್ಟ್ರ­ಕೂಟರ ಆಡಳಿತ, ಮಿತಾಕ್ಷರ ಕಾನೂನು ಕೃತಿ ರಚಿಸಿದ ವಿಜ್ಞಾನೇಶ್ವರನಿಗೆ ನಮಸ್ಕರಿಸುವ ವಿಕ್ರಮಾಧಿತ್ಯ, ಮಾನಸೋಲ್ಲಾಸ ಕೃತಿ ರಚನೆ­ಯಲ್ಲಿ ತೊಡಗಿರುವ ಕಲ್ಯಾಣ ಚಾಲುಕ್ಯ ರಾಜ ಸೋಮೇಶ್ವರ, ಬಸವಣ್ಣ– ಅಕ್ಕಮಹಾದೇವಿ – ಅಲ್ಲಮ ಪ್ರಭು ಅವರ ಭೇಟಿ, ಸಂತನಾಗಲು ಅರಮನೆಯಿಂದ ಹೊರಡುತ್ತಿರುವ ಬಸವಣ್ಣ ಅವರ ಚಿತ್ರಕಲೆಗಳಿರುತ್ತವೆ.

ಎರಡನೇ ಹಂತದಲ್ಲಿ ಪರ್ಷಿಯಾದ ಕವಿಗಳನ್ನು ಬರಮಾಡಿಕೊಳ್ಳುವ ಅಹ್ಮದ್‌ ಶಾ ಬಹಮನಿ; ಬಿದರಿ ಕಲಾವಿದರ ಜೊತೆಗೆ ಚರ್ಚಿಸುತ್ತಿರುವ ಅಲಾಸುದ್ದೀನ್‌ ಶಾ ಬಹಮನಿ, ಖಾಜಾ ಗವಾನ್‌ ಬಳಿ ಕುಳಿತಿರುವ ಮಹಮ್ಮದ್‌ ಗವಾನ್‌,

ಹೈದರಾಬಾದ್‌ ನಿಜಾಮ್‌ರಿಗೆ ನೀರು ಕೊಡುತ್ತಿರುವ ಸಂತ ಬೊಮ್ಮಗೊಂಡ ಅವರ ಚಿತ್ರಕಲೆಗಳು ಇರುತ್ತವೆ. ಉಳಿದಂತೆ ಜಿಲ್ಲೆಯ ಕೃಷಿ ಮತ್ತು ಸಾಂಸ್ಕೃತಿಕ ಚಿತ್ರಣ ನೀಡುವ ದೃಶ್ಯಗಳು ಇರಲಿವೆ.


ನಗರದ ಕೇಂದ್ರದಲ್ಲಿ ಇರುವ ರೈಲ್ವೆ ಕೆಳ­ಸೇತುವೆಯ ಗೋಡೆಗಳು ವಿರೂಪ ಆಗಬಾರದು, ಸೌಂದರ್ಯ ಉಳಿಸುವ ಜೊತೆಗೆ, ಇತಿಹಾಸದ ಘಟನೆಗಳ ಚಿತ್ರಣವನ್ನೂ ನೀಡಬೇಕು ಎಂಬ ಚಿಂತನೆಯಿಂದಾಗಿ ಜಿಲ್ಲಾಡಳಿತದ ಸಹಯೋಗ­ದಲ್ಲಿ ಈ ಕಾರ್ಯ ನಡೆದಿದೆ.

ಆ ಮಾರ್ಗದಲ್ಲಿ ಸದ್ಯ ವಾಹನ ಸಂಚಾರಕ್ಕೆ ನಿರ್ಬಂಧ ಹೇರಿದ್ದು, ಚಾಲಕರಿಗೆ ಸ್ವಲ್ಪ ಮಟ್ಟಿಗೆ ಸಮಸ್ಯೆಯೂ ಆಗಿದೆ. ಹಿಂದಿನಂತೆ ಬಸವೇಶ್ವರ ವೃತ್ತಕ್ಕೆ ಹೊಂದಿಕೊಂಡ ರಸ್ತೆಗಳ ಮೇಲೆ ಹೆಚ್ಚಿನ ಸಂಚಾರದ ದಟ್ಟಣೆ ಕಾಣಿಸಿಕೊಳ್ಳುತ್ತಿದೆ. ಆದಷ್ಟು ಶೀಘ್ರ ರಸ್ತೆಯನ್ನು ಸಂಚಾರಕ್ಕೆ ಮುಕ್ತಗೊಳಿಸ­ಬೇಕು ಎಂಬ ಆಗ್ರಹವೂ ಕೇಳಿಬರುತ್ತಿದೆ.

ಇನ್ನೊಂದೆಡೆ, ಉಬ್ಬು ಶಿಲ್ಪ ಬದಲಿಗೆ ಚಿತ್ರಕಲೆಯಲ್ಲೇ ಚಿತ್ರಿಸಿದ್ದರೆ ಚೆನ್ನಾಗಿದ್ದು, ಆಕರ್ಷಣೆಯೂ ಹೆಚ್ಚುತ್ತಿತ್ತು ಎಂಬ ವಾದವು ಇದೆ. ದೀರ್ಘ ಕಾಲ ಉಳಿಯುತ್ತದೆ ಹಾಗೂ ನಿರ್ವಹಣೆ ಹೊಣೆ ಇರುವುದಿಲ್ಲ ಎಂಬ ದೃಷ್ಟಿಯಿಂದ ಉಬ್ಬು ಶಿಲ್ಪ ಸೂಕ್ತ ಎಂದು ತೀರ್ಮಾನಿಸಲಾಯಿತು ಎಂಬ ಸಮರ್ಥನೆಯೂ ವ್ಯಕ್ತವಾಗಿದೆ.

ಒಟ್ಟಿನಲ್ಲಿ ನಿಗದಿತ ವೇಳೆಗೆ ಕಾರ್ಯ ಪೂರ್ಣಗೊಂಡರೆ, ಆ ನಂತರ ಈ ಮಾರ್ಗದಲ್ಲಿ ಸಂಚರಿಸುವ ಜನರು ಒಂದೇ ಸಾಲಿನಲ್ಲಿ ಇತಿಹಾಸದ ಘಟನೆಗಳನ್ನು ಮೆಲುಕು ಹಾಕ­ಬಹುದು, ಕಣ್ತುಂಬಿಕೊಳ್ಳಬಹುದು.

‘ಶ್ಲಾಘನೀಯ ಕೆಲಸ ಆಗಲಿ’

‘ಜನರಿಂದ ದೊರೆಯುವ ಮೆಚ್ಚುಗೆ ಕಲಾವಿದನಿಗೆ ಯಾವುದೇ ಪ್ರಶಸ್ತಿಗಿಂತಲೂ ದೊಡ್ಡದು. ಹಾಗೇ ಜನಮೆಚ್ಚುಗೆಗೆ ಪಾತ್ರವಾಗು ಕಾರ್ಯ ಈ ಶಿಬಿರದಲ್ಲಿ ಆಗಲಿ ಎಂದು ಆಶಿಸುತ್ತೇನೆ.’
–ಮಹದೇವಪ್ಪ ಶಂಭುಲಿಂಗಪ್ಪ ಶಿಲ್ಪಿ,
ಅಧ್ಯಕ್ಷ, ಕರ್ನಾಟಕ ಶಿಲ್ಪಕಲಾ ಅಕಾಡೆಮಿ

source:http://www.prajavani.net/article/%E0%B2%89%E0%B2%AC%E0%B3%8D%E0%B2%AC%E0%B3%81-%E0%B2%B6%E0%B2%BF%E0%B2%B2%E0%B3%8D%E0%B2%AA%E0%B2%95%E0%B2%B2%E0%B3%86%E0%B2%AF%E0%B2%B2%E0%B3%8D%E0%B2%B2%E0%B2%BF-%E0%B2%87%E0%B2%A4%E0%B2%BF%E0%B2%B9%E0%B2%BE%E0%B2%B8-%E0%B2%B2%E0%B3%87%E0%B2%AA%E0%B2%A8

No comments:

Post a Comment