ಬೀದರ: ಬ್ರಿಟಿಷರ ವಿರುದ್ಧ ಸ್ವಾತಂತ್ರಕ್ಕಾಗಿ ಹೋರಾಡಿ ಕಿಚ್ಚು ಮೂಡಿಸಿದ್ದ ಸಂಗೊಳ್ಳಿ ರಾಯಣ್ಣ ಅಪ್ರತಿಮ ದೇಶಭಕ್ತ. ಅವರ ಹೋರಾಟ ಯುವ ಜನಾಂಗಕ್ಕೆ ಪ್ರೇರಣೆಯಾಗಬೇಕು ಎಂದು ಸಂಸದ ಎನ್.ಧರ್ಮಸಿಂಗ್ ಹೇಳಿದರು.
ನಗರದ ರಂಗ ಮಂದಿರದಲ್ಲಿ ಜಿಲ್ಲಾ ಗೊಂಡ ವಿದ್ಯಾರ್ಥಿ ಸಂಘ ಹಮ್ಮಿಕೊಂಡಿದ್ದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನವರ 217ನೇ ಜಯಂತ್ಯೋತ್ಸವ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಬ್ರಿಟಿಷರ ವಿರುದ್ಧ ನ್ಯಾಯಕ್ಕಾಗಿ ಕೆಚ್ಚೆದೆಯಿಂದ ಹೋರಾಡಿದ ರಾಯಣ್ಣ ಮಹಾನ್ ಚೇತನ. ಅವರ ಸ್ಮರಣೆ ನಿರಂತರವಾಗಿ ಮಾಡುವುದು ನಮ್ಮೆಲ್ಲರ ಕರ್ತವ್ಯ ಎಂದು ಹೇಳಿದರು.
ಅಪ್ರತಿಮ ಹೋರಾಟಗಾರ ರಾಯಣ್ಣನಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯದಲ್ಲಿ ಉತ್ತಮ ಆಡಳಿತ ನಡೆಸುವ ಮೂಲಕ ಮೆಚ್ಚುವಂಥ ಕಾರ್ಯ ಮಾಡುತ್ತಿದ್ದಾರೆ. ತಾವು ಸಿಎಂ ಆಗಿದ್ದಾಗ ಉಪ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಈ ಹಿಂದೆಯೇ ಸಿಎಂ ಹುದ್ದೆಗೆ ಏರಬೇಕಾಗಿತ್ತಾದರೂ ಸಾಧ್ಯವಾಗಿರಲಿಲ್ಲ. ಆದರೆ, ಅವರೊಬ್ಬ ಸಂಘರ್ಷ ಜೀವಿ ಮತ್ತು ತಾಳ್ಮೆಯುಳ್ಳ ವ್ಯಕ್ತಿಯಾಗಿದ್ದರಿಂದಲೇ ಇಂದು ಸಿಎಂ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದರು.
ಕುರುಬ ಸಮಾಜಕ್ಕೆ ಹೆಚ್ಚಿನ ಪ್ರಾಶಸ್ತÂ ಸಿಗುತ್ತಿಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ. ಆದರೆ, ಇಂದು ಆ ಸಮಾಜದವರೇ ಮುಖ್ಯಮಂತ್ರಿಯಾಗಿದ್ದಾರೆ. ರಾಜ್ಯವನ್ನು ಪ್ರಗತಿಪಥದಲ್ಲಿ ಕೊಂಡೊಯ್ಯುವ ನಿಟ್ಟಿನಲ್ಲಿ ಸಿದ್ದರಾಮಯ್ಯ ಅವರಿಗೆ ಎಲ್ಲರೂ ಸಹಕಾರ ನೀಡಬೇಕಾಗಿದೆ ಎಂದರು.
ನಿವೃತ್ತ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಜಿ.ಎಂ. ಯಾತನೂರ ಮಾತನಾಡಿ, ಸಂಗೊಳ್ಳಿ ರಾಯಣ್ಣ ಹೋರಾಟದ ಹಾದಿ ಎಲ್ಲರಿಗೂ ಮಾರ್ಗದರ್ಶಕವಾಗಬೇಕು. ಪ್ರತಿಯೊಂದು ಮನೆಯಲ್ಲಿ ಒಬ್ಬ ರಾಯಣ್ಣ ಜನ್ಮ ತಾಳಬೇಕು ಎಂದು ಹೇಳಿದರು.
ಸಂಘದ ಅಧ್ಯಕ್ಷ ಸಂತೋಷ ಜೋಳದಾಪಕೆ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಖಾಜಿ ಅರ್ಷದ್ ಅಲಿ, ಜಿಪಂ ಸದಸ್ಯ ಡಾ| ಶೈಲೇಂದ್ರ ಬೆಲ್ದಾಳೆ, ಮಾಜಿ ಸದಸ್ಯ ಅಮೃತರಾವ ಚಿಮಕೋಡೆ, ಕಾಂಗ್ರೆಸ್ ಮುಖಂಡ ಅರವಿಂದಕುಮಾರ ಅರಳಿ ಮತ್ತು ವಿಜಯಕುಮಾರ ಸೋನಾರೆ ಇದ್ದರು.
ಸಮಾರಂಭಕ್ಕೂ ಮುನ್ನ ನಗರದ ಬೊಮ್ಮಗೊಂಡೇಶ್ವರ ವೃತ್ತದಿಂದ ಸಂಗೊಳ್ಳಿ ರಾಯಣ್ಣನವರ ಭಾವಚಿತ್ರದ ಮೆರವಣಿಗೆ ನಡೆಸಲಾಯಿತು. ಬಸವೇಶ್ವರ ವೃತ್ತ, ಅಂಬೇಡ್ಕರ್ ವೃತ್ತ, ಶಿವಾಜಿ ವೃತ್ತ, ಹರಳಯ್ಯ ವೃತ್ತ ಮೂಲಕ ಸಂಚರಿಸಿ ಜಿಲ್ಲಾ ರಂಗ ಮಂದಿರದಲ್ಲಿ ಸಮಾವೇಶಗೊಂಡಿತು. ರಾಯಣ್ಣನ ವೇಷಧಾರಿ ಯುವಕ ಮತ್ತು ಡೊಳ್ಳು ಕುಣಿತ ಮೆರವಣಿಗೆಯ ಮೆರುಗು ಹೆಚ್ಚಿಸಿತು.
Source:http://splashurl.com/pxsmha6