Saturday, June 1, 2013

ಬೀದರ್: ಶಾಹೀನ್ ಪಿ.ಯು. ಕಾಲೇಜು ಮೆಡಿಕಲ್‌ನಲ್ಲಿ ೩೨, ಎಂಜಿನಿಯರಿಂಗ್‌ನಲ್ಲಿ ೩೮ನೇ ರ‍್ಯಾಂಕ್





ಸಿ.ಇ.ಟಿ.ಯಲ್ಲಿ ಲಾರಿ ಚಾಲಕನ ಮಗನ ವಿಕ್ರಮ ಸಿ.ಇ.ಟಿ.: ಬಡ ಪ್ರತಿಭೆಗಳ ಸಾಧನೆ

ಬೀದರ: ಪ್ರಸಕ್ತ ಸಾಲಿನ ಸಾಮಾನ್ಯ ಪ್ರವೇಶ ಪರೀಕ್ಷೆ(ಸಿ‌ಇಟಿ)ಯಲ್ಲಿ ಬೀದರ ನಗರದ ಶಾಹೀನ್ ಕಾಲೇಜಿನ ಇಬ್ಬರು ವಿದ್ಯಾರ್ಥಿಗಳು ಮೆಡಿಕಲ್ ಹಾಗೂ ಎಂಜಿನಿಯರಿಂಗ್ ವಿಭಾಗದಲ್ಲಿ ೫೦ಕ್ಕೂ ಕಡಿಮೆ ರ‍್ಯಾಂಕ್ ಪಡೆದು ಸಾಧನೆಗೈದಿದ್ದಾರೆ.

ಸೀಮಾ ಅಫ್ರಿನ್ ಕಾಜಿ ಮೆಡಿಕಲ್ ವಿಭಾಗದಲ್ಲಿ ೩೨ನೇ ರ‍್ಯಾಂಕ್ ಗಳಿಸಿದರೆ ರೈಸ್‌ಖಾನ್ ನಾಸೀರ್‌ಖಾನ್ ಎಂಜಿನಿಯರಿಂಗ್ ವಿಭಾಗದಲ್ಲಿ ೩೮ನೇ ರ‍್ಯಾಂಕ್ ಪಡೆದು ಗಮನ ಸೆಳೆದಿದ್ದಾರೆ. ಅಲ್ಲದೆ, ಎರಡೂ ವಿಭಾಗಗಳಲ್ಲಿ ಜಿಲ್ಲೆಗೆ ಅಗ್ರಸ್ಥಾನ ಪಡೆದ ಗೌರವಕ್ಕೆ ಭಾಜನರಾಗಿದ್ದಾರೆ.

ಕಾಲೇಜಿನ ೧೫ ವಿದ್ಯಾರ್ಥಿಗಳು ಐನೂರರ ಒಳಗೆ, ೩೩ ವಿದ್ಯಾರ್ಥಿಗಳು ಸಾವಿರದ ಒಳಗೆ ಹಾಗೂ ೬೮ ವಿದ್ಯಾರ್ಥಿಗಳು ೨,೫೦೦ ರ ಒಳಗೆ ರ‍್ಯಾಂಕ್ ಪಡೆದಿದ್ದಾರೆ.
ಈ ಬಾರಿ ಕಾಲೇಜಿನ ಒಟ್ಟು ೭೦ ವಿದ್ಯಾರ್ಥಿಗಳು ವೈದ್ಯಕೀಯ ವಿಭಾಗದಲ್ಲಿ ಸರ್ಕಾರಿ ಕೋಟಾದಡಿ ಉಚಿತ ಸೀಟುಗಳನ್ನು ಪಡೆಯಲಿದ್ದಾರೆ ಎಂದು ಶಾಹೀನ್ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಅಬ್ದುಲ್ ಖದೀರ್ ತಿಳಿಸಿದ್ದಾರೆ.

ಜಿಲ್ಲೆಗೆ ಈವರೆಗೆ ಮೆಡಿಕಲ್ ವಿಭಾಗದಲ್ಲಿ ೫೦ ರ ಒಳಗೆ ಹಾಗೂ ಎಂಜಿನಿಯರಿಂಗ್ ವಿಭಾಗದಲ್ಲಿ ೧೦೦ ರ ಒಳಗೆ ರ‍್ಯಾಂಕ್ ಬಂದಿರಲಿಲ್ಲ. ಕಾಲೇಜು ವಿದ್ಯಾರ್ಥಿಗಳು ಅಂತಹ ಸಾಧನೆ ಮಾಡಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದು ಹೇಳಿದ್ದಾರೆ.

ಸಾಮಾನ್ಯ ಪ್ರವೇಶ ಪರೀಕ್ಷೆಯಲ್ಲಿ ಸಾಧನೆ ತೋರಿರುವ ವಿದ್ಯಾರ್ಥಿಗಳು, ಕಾಲೇಜು ಬೋಧಕ ಸಿಬ್ಬಂದಿಗೆ ಅಭಿನಂದನೆ ತಿಳಿಸಿದ್ದಾರೆ.


ಸಿ.ಇ.ಟಿ.ಯಲ್ಲಿ ಲಾರಿ ಚಾಲಕನ ಮಗನ ವಿಕ್ರಮ
ಬೀದರ: ಈ ಬಾರಿಯ ಸಾಮಾನ್ಯ ಪ್ರವೇಶ ಪರೀಕ್ಷೆ(ಸಿ.ಇ.ಟಿ.)ಯ ಎಂಜಿನಿಯರಿಂಗ್ ವಿಭಾಗದಲ್ಲಿ ಲಾರಿ ಚಾಲಕರ ಮಗನೊಬ್ಬ ೩೮ನೇ ರ‍್ಯಾಂಕ್ ಗಳಿಸುವ ಮೂಲಕ ಹೊಸ ವಿಕ್ರಮ ಸಾಧಿಸಿದ್ದಾನೆ.

ಬೀದರ ನಗರದ ಶಾಹೀನ್ ಕಾಲೇಜು ವಿದ್ಯಾರ್ಥಿ ಬಸವಕಲ್ಯಾಣ ತಾಲ್ಲೂಕಿನ ರಾಜೇಶ್ವರ ಗ್ರಾಮದ ರೈಸ್‌ಖಾನ್ ನಾಸೀರ್‌ಖಾನ್ ಇಂತಹ ಸಾಧನೆ ಮಾಡಿದವರು. ಜಿಲ್ಲೆಯಲ್ಲಿ ೫೦ ರ ಒಳಗೆ ರ‍್ಯಾಂಕ್ ಪಡೆದವರಲ್ಲಿ ಮೊದಲಿಗರಾಗಿ ಹೊರ ಹೊಮ್ಮಿದ್ದಾರೆ.

ರೈಸ್‌ಖಾನ್ ಲಾರಿ ಚಾಲಕ ನಾಸೀರ್‌ಖಾನ್ ಅವರ ಪುತ್ರರಾಗಿದ್ದಾರೆ. ತಾಯ ಗೃಹಿಣಿಯಾಗಿದ್ದಾರೆ. ಈ ದಂಪತಿಗೆ ಮೂವರು ಪುತ್ರರು ಹಾಗೂ ಒಬ್ಬ ಪುತ್ರಿ ಇದ್ದಾರೆ. ಲಾರಿ ಚಾಲನೆಯಿಂದ ಬಂದ ಸಂಪಾದನೆಯಲ್ಲೇ ಮಕ್ಕಳನ್ನು ಓದಿಸುವ ಹಾಗೂ ಕುಟುಂಬ ನಿರ್ವಹಿಸುವ ಜವಾಬ್ದಾರಿ ನಾಸೀರ್‌ಖಾನ್ ಅವರ ಮೇಲಿದೆ.

ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ. ೯೪.೫೬ ಅಂಕ ಪಡೆದಿದ್ದ ಮೊದಲ ಪುತ್ರ ರೈಸ್‌ಖಾನ್‌ಗೆ ನಗರದ ಶಾಹೀನ್ ಕಾಲೇಜಿನಲ್ಲಿ ಉಚಿತ ಪ್ರವೇಶ ಕಲ್ಪಿಸಲಾಗಿತ್ತು. ಊಟ ಹಾಗೂ ವಸತಿಗಾಗಿ ಅತ್ಯಲ್ಪ ಶುಲ್ಕ ಮಾತ್ರ ಪಡೆಯಲಾಗಿತ್ತು. ಕುಟುಂಬದ ಸ್ಥಿತಿಯನ್ನು ನೋಡಿ ಕಷ್ಟಪಟ್ಟು ಓದಿದ ರೈಸ್‌ಖಾನ್ ಪಿಯುಸಿಯಲ್ಲಿ ಶೇ. ೯೪.೮೩ ಅಂಕ ಪಡೆದ. ಈಗ ಎಂಜಿನಿಯರಿಂಗ್‌ನಲ್ಲಿ ೩೮ನೇ ರ‍್ಯಾಂಕ್ ಗಳಿಸಿ ಎಲ್ಲರನ್ನು ಬೆರಗುಗೊಳಿಸಿದ್ದಾನೆ.

ಬಡತನವೇ ನನ್ನಲ್ಲಿ ಓದುವ ಛಲ ಹುಟ್ಟಿಸಿತು. ಸಂಪೂರ್ಣ ಗಮನ ಓದಿನತ್ತಲೇ ಕೇಂದ್ರೀಕರಿಸಿದೆ. ಅದರ ಫಲಶ್ರುತಿಯಿಂದಾಗಿ ಈ ಸಾಧನೆ ಮಾಡಲು ಸಾಧ್ಯವಾಯಿತು ಎಂದು ಹೇಳಿದ್ದಾನೆ. ಎಂಜಿನಿಯರಿಂಗ್‌ನಲ್ಲಿ ಉತ್ತಮ ರ‍್ಯಾಂಕ್ ಬಂದಿದೆ. ಆದರೆ, ಬಡತನದಿಂದಾಗಿ ಶಿಕ್ಷಣ ಮುಂದುವರೆಸುವುದು ಕಷ್ಟವಾಗಿದೆ. ಯಾರಾದರೂ ನೆರವು ನೀಡಿದರೆ ಗುರಿ ಮುಟ್ಟಬಹುದು. ಎಂಜಿನಿಯರ್ ಆದ ನಂತರ ನನ್ನಂತೆಯೇ ಬಡತನದಲ್ಲಿರುವ ಮಕ್ಕಳಿಗೆ ನೆರವಾಗಬಹುದು ಎಂದು ತಿಳಿಸಿದ್ದಾನೆ. ರೈಸ್‌ಖಾನ್ ಮೊಬೈಲ್ ಸಂಖ್ಯೆ ೭೩೫೩೮೧೮೧೭೧.


ಸಿ.ಇ.ಟಿ.: ಬಡ ಪ್ರತಿಭೆಗಳ ಸಾಧನೆ
ಪಿಯುಸಿಯಲ್ಲಿ ಬೀದರ ನಗರದ ಶಾಹೀನ್ ಕಾಲೇಜಿನಲ್ಲಿ ಉಚಿತ ಪ್ರವೇಶ ಕಲ್ಪಿಸಲಾಗಿದ್ದ ಬಡ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳು ಪ್ರಸಕ್ತ ಸಾಲಿನ ಸಾಮಾನ್ಯ ಪ್ರವೇಶ ಪರೀಕ್ಷೆ(ಸಿ.ಇ.ಟಿ.)ಯ ಮೆಡಿಕಲ್ ಹಾಗೂ ಎಂಜಿನಿಯರಿಂಗ್ ವಿಭಾಗದಲ್ಲಿ ಗಮನ ಸೆಳೆಯುವ ಸಾಧನೆ ಮಾಡಿದ್ದಾರೆ.

ಬಡತನ, ಕೌಟುಂಬಿಕ ಸಮಸ್ಯೆಯ ನಡುವೆಯೂ ಮೆಡಿಕಲ್ ಹಾಗೂ ಎಂಜಿನಿಯರಿಂಗ್ ಶಿಕ್ಷಣದ ಕದ ತಟ್ಟಿದ್ದಾರೆ. ಆ ಮೂಲಕ ಸಾಧನೆಗೆ ಬಡತನ ಅಡ್ಡಿಯಾಗದು ಎನ್ನುವುದನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. ಮೆಡಿಕಲ್ ಹಾಗೂ ಎಂಜಿನಿಯರಿಂಗ್ ವಿಭಾಗದಲ್ಲಿ ಸಾಧನೆಗೈದಿರುವ ಕಾಲೇಜಿನ ಬಡ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳ ವಿವರ ಇಲ್ಲಿದೆ.

ಶಿಕ್ಷಕ ದಂಪತಿಯ ಮಗನ ಸಾಧನೆ: ನಗರದ ಶಾಹೀನ್ ಕಾಲೇಜು ವಿದ್ಯಾರ್ಥಿ, ಶಿಕ್ಷಕ ದಂಪತಿಯ ಮಗನೊಬ್ಬ ಸಾಮಾನ್ಯ ಪ್ರವೇಶ ಪರೀಕ್ಷೆಯ ಮೆಡಿಕಲ್ ವಿಭಾಗದಲ್ಲಿ ೧೮೩ನೇ ರ‍್ಯಾಂಕ್ ಗಳಿಸಿ ಸಾಧನೆಗೈದಿದ್ದಾರೆ.

ಬೀದರ ತಾಲ್ಲೂಕಿನ ಹೊಕ್ರಾಣ (ಬಿ) ಸಾಗರ್ ಮಲ್ಲಪ್ಪ ಹೊಗಾಡೆ ವೈದ್ಯಕೀಯ ವಿಭಾಗದಲ್ಲಿ ೨೦೦ ರ ಒಳಗೆ ರ‍್ಯಾಂಕ್ ಪಡೆದ ವಿದ್ಯಾರ್ಥಿ.
ಸಾಗರ್ ತಂದೆ ಮಲ್ಲಪ್ಪ ಹಾಗೂ ತಾಯಿ ಇಬ್ಬರೂ ಪ್ರಾಥಮಿಕ ಶಾಲಾ ಶಿಕ್ಷಕರಾಗಿದ್ದಾರೆ. ಇವರ ಮೂವರು ಮಕ್ಕಳಲ್ಲಿ ಇಬ್ಬರು ಎಂಜಿನಿಯರಿಂಗ್ ಓದುತ್ತಿದ್ದಾರೆ. ಸಾಗರ್ ಈಗ ಮೆಡಿಕಲ್ ಶಿಕ್ಷಣಕ್ಕೆ ಅರ್ಹತೆ ಗಿಟ್ಟಿಸಿದ್ದಾರೆ. ಸಾಗರ್‌ಗೆ ಶಾಹೀನ್ ಕಾಲೇಜಿನಲ್ಲಿ ಅಲ್ಪ ಶುಲ್ಕದ ಮೇಲೆ ಪ್ರವೇಶ ನೀಡಲಾಗಿತ್ತು. ವೈದ್ಯನಾಗಿ ಬಡ ಜನರಿಗೆ ಕಡಿಮೆ ದರದಲ್ಲಿ ಆರೋಗ್ಯ ಸೇವೆ ಕಲ್ಪಿಸಬೇಕೆಂಬ ಗುರಿ ಇವನದ್ದಾಗಿದೆ. ಸಾಗರ್ ಮೊಬೈಲ್ ಸಂಖ್ಯೆ ೯೩೪೧೭೨೩೨೮೨

ನಿವೃತ್ತ ಸೆಕ್ಯುರಿಟಿ ಗಾರ್ಡ್ ಮಗಳಿಗೆ ವೈದ್ಯೆಯಾಗುವ ಆಸೆ: ಸ್ವಯಂ ನಿವೃತ್ತಿ ಪಡೆದ ನಗರದ ಎನ್‌ಇಕೆ‌ಎಸ್‌ಆರ್‌ಟಿಸಿಯ ಸೆಕ್ಯುರಿಟಿ ಗಾರ್ಡ್ ಮಗಳು ಆಸಿಯಾ ಬೇಗಂ ಸಾಮಾನ್ಯ ಪ್ರವೇಶ ಪರೀಕ್ಷೆಯ ಮೆಡಿಕಲ್ ವಿಭಾಗದಲ್ಲಿ ೬೫೩ನೇ ರ‍್ಯಾಂಕ್ ಗಳಿಸಿದ್ದಾಳೆ.

ಒಂದೆಡೆ ತಂದೆ ಕಿಡ್ನಿ ಸಮಸ್ಯೆಯಿಂದ ನರಳುತ್ತಿದ್ದರೆ, ಮತ್ತೊಂದೆಡೆ ಮಕ್ಕಳ ಶಿಕ್ಷಣ ಹಾಗೂ ಕುಟುಂಬ ಖರ್ಚು ಹೋರಲಾಗದಂಥ ಸ್ಥಿತಿ ಈ ಕುಟುಂಬದ್ದು.
ಕುಟುಂಬದ ಸ್ಥಿತಿ ಕಂಡು ಶಾಹೀನ್ ಕಾಲೇಜು ಕಾರ್ಯದರ್ಶಿ ಅಬ್ದುಲ್ ಖದೀರ್ ಪಿಯುಸಿಯಲ್ಲಿ ಉಚಿತ ಪ್ರವೇಶ ಕಲ್ಪಿಸಿದರು. ಅವರ ನಿರೀಕ್ಷೆಯಂತೆ ಪಿಯುಸಿಯಲ್ಲಿ ಶೇ. ೮೯.೬೭ ಅಂಕ ಗಳಿಸಿದ ಈಕೆ ಈಗ ಸಿ‌ಇಟಿಯಲ್ಲಿಯೂ ಸಾಧನೆ ಮೆರೆದಿದ್ದಾಳೆ.

ಖದೀರ್ ಅವರೇ ನನ್ನ ತಂದೆಯ ಚಿಕಿತ್ಸೆಗೂ ನೆರವಾಗಿ ಮಾನವೀಯತೆ ಮೆರೆದಿದ್ದರು. ಮುಂದೆ ಸರ್ಕಾರ, ದಾನಿಗಳು, ಸಂಘ ಸಂಸ್ಥೆಗಳು ಸಹಾಯಹಸ್ತ ಚಾಚಿದರೆ ವೈದ್ಯ ಶಿಕ್ಷಣ ಪೂರ್ಣಗೊಳಿಸಬಹುದು ಎಂದು ಹೇಳಿದ್ದಾಳೆ. ಆಸಿಯಾ ಬೇಗಂ ಮೊಬೈಲ್ ಸಂಖ್ಯೆ ೯೪೪೯೪೬೦೦೪೯

ರೈತನ ಮಗನಿಗೆ ವೈದ್ಯನಾಗುವ ಹಟ: ಸಾಮಾನ್ಯ ಪ್ರವೇಶ ಪರೀಕ್ಷೆಯ ವೈದ್ಯಕೀಯ ವಿಭಾಗದಲ್ಲಿ ೯೫೧ನೇ ರ‍್ಯಾಂಕ್ ಗಳಿಸಿರುವ ಬಡ ರೈತನ ಪುತ್ರ, ಔರಾದ್ ತಾಲ್ಲೂಕಿನ ತೋರಣಾ ಗ್ರಾಮದ ಬಸವರಾಜ ವಿಜಯಕುಮಾರ್ ಶೆಟಕಾರ್‌ಗೆ ಹೆಸರಾಂತ ವೈದ್ಯನಾಗಬೇಕೆಂಬ ಹಟ ಇದೆ.

ತಂದೆಗೆ ಐದು ಎಕರೆ ಜಮೀನಿದ್ದು, ನಾಲ್ವರು ಮಕ್ಕಳಿದ್ದಾರೆ. ಕುಟುಂಬದ ನಿರ್ವಹಣೆಯ ಜೊತೆಗೆ ಮಕ್ಕಳ ಶಿಕ್ಷಣಕ್ಕಾಗಿಯೂ ಬೆವರು ಸುರಿಸುತ್ತಿದ್ದಾರೆ. ಮೊದಲ ಪುತ್ರ ಬಸವರಾಜ ಮೆಡಿಕಲ್‌ಗೆ ಅರ್ಹತೆ ಪಡೆದಿರುವುದು ಅವರ ಕುಟುಂಬದಲ್ಲಿ ಸಂತಸದ ಹೊಳೆ ಹರಿಸಿದೆ.

ಬಸವರಾಜನಿಗೆ ಪಿಯುಸಿಯಲ್ಲಿ ಶಾಹೀನ್ ಕಾಲೇಜಿನಲ್ಲಿ ಉಚಿತ ಪ್ರವೇಶ ನೀಡಲಾಗಿತ್ತು. ದ್ವಿತೀಯ ಪಿಯುಸಿಯಲ್ಲಿ ಶೇ ೮೫.೫೦ ಅಂಕ ಗಳಿಸಿದ ಬಸವರಾಜ ಈಗ ಸಿ.ಇ.ಟಿ.ಯಲ್ಲೂ ಗಮನಾರ್ಹ ಸಾಧನೆ ಮಾಡಿದ್ದಾನೆ. ವಿಷಯ ಅರ್ಥೈಸಿಕೊಂಡು ಓದಿದರೆ ಸಾಧನೆ ಸಾಧ್ಯ ಎಂದು ಹೇಳಿದ್ದಾನೆ. ಆರ್ಥಿಕ ಸಂಕಷ್ಟವೇ ಈತನನ್ನು ಮುಂದಿನ ಶಿಕ್ಷಣದ ಬಗ್ಗೆ ಚಿಂತಾಕ್ರಾಂತನನ್ನಾಗಿ ಮಾಡಿದೆ. ಬಸವರಾಜನ ಮೊಬೈಲ್ ಸಂಖ್ಯೆ ೯೬೩೨೨೫೫೫೪೬


Source:http://www.sahilonline.org/kannada/state_news/16309.html

No comments:

Post a Comment