Thursday, November 22, 2012

ಬೀದರ್ ಟರ್ಮಿನಲ್‌ಗೆ ಅಧಿಕಾರಿಗಳ ತಂಡ ಭೇಟಿ



ಬೀದರ್: ನಗರ ಹೊರವಲಯದಲ್ಲಿ ಚಿದ್ರಿ ಬಳಿ ನಿರ್ಮಾಣವಾಗಿರುವ ವೈಮಾನಿಕ ಟರ್ಮಿನಲ್‌ನ ಕಾರ್ಯಾರಂಭ ಕುರಿತಂತೆ ಸೋಮವಾರ ಭಾರತೀಯ ವಿಮಾನ ಪ್ರಾಧಿಕಾರ, ವಾಯುಪಡೆ, ಸರ್ಕಾರ ಮತ್ತು ಜಿಎಂಆರ್ ಪ್ರತಿನಿಧಿಗಳು ಜಂಟಿ ಸ್ಥಳ ವೀಕ್ಷಣೆ ಮಾಡಿ ಪರಿಶೀಲಿಸಿದರು. ಈ ಭೇಟಿಯ ಹಿನ್ನೆಲೆಯಲ್ಲಿ ನಗರದಲ್ಲಿ ನಿರ್ಮಾಣವಾಗಿರುವ ಏರ್‌ಪೋರ್ಟ್ ಟರ್ಮಿನಲ್ ಕಾರ್ಯಾರಂಭ ಮಾಡುವ ಕುರಿತ ನಿರೀಕ್ಷೆಗಳು ಮತ್ತೆ ಗರಿಗೆದರಿವೆ.

`ಸ್ಥಳ ಪರೀಶೀಲನೆ ಹಂತದಲ್ಲಿ ಯಾವುದೇ ತಕರಾರು ವ್ಯಕ್ತವಾಗಿಲ್ಲ. ಜಿಎಂಆರ್ ಕಂಪನಿಯ ಪ್ರತಿನಿಧಿಗಳು ಸಂಸ್ಥೆಯ ನಿಲುವು ಕುರಿತು ವರದಿ ಸಲ್ಲಿಸುವ ವಾಗ್ದಾನ ಮಾಡಿದ್ದು, ವರದಿ ಬಂದ ಬಳಿಕ ಮುಂದಿನ ಸಾಧ್ಯತೆಗಳ ಬಗೆಗೆ ಚರ್ಚೆ ನಡೆಯಲಿದೆ` ಎಂದು ಪರಿಶೀಲನೆಯ ಬಳಿಕ ಜಿಲ್ಲಾಧಿಕಾರಿ ಡಾ. ಪಿ.ಸಿ.ಜಾಫರ್ ಅವರು ತಿಳಿಸಿದರು.
ಪ್ರಸ್ತುತ ಹೈದರಾಬಾದ್‌ನ ವಿಮಾನ ನಿಲ್ದಾಣದ ನಿರ್ವಹಣೆ ಮಾಡುತ್ತಿರುವ ಜಿಎಂಆರ್ ಸಂಸ್ಥೆಯು, ಹೈದರಾಬಾದ್ ನಿಲ್ದಾಣದ 150 ಕಿ.ಮೀ. ಪರಿಧಿಯಲ್ಲಿ ಮತ್ತೊಂದು ಟರ್ಮಿನಲ್ ಕಾರ್ಯಾರಂಭ ಮಾಡಬಾರದು ಎಂದು ಒಪ್ಪಂದ ಮಾಡಿಕೊಂಡಿದೆ ಎಂಬ ಹಿನ್ನೆಲೆಯಲ್ಲಿ ಬೀದರ್‌ನಲ್ಲಿ ನಿರ್ಮಾಣ ಮಾಡಿರುವ ಟರ್ಮಿನಲ್ ಕಾರ್ಯಾರಂಭ ನೆನೆಗುದಿಗೆ ಬಿದ್ದಿದೆ.

ವಿಮಾನ ಯಾನದ ಸಾಧ್ಯತೆಗಳು, ಟರ್ಮಿನಲ್ ನಿರ್ಮಾಣದಲ್ಲಿ ಆಗಿರುವ ಪ್ರಗತಿ, ಸೌಲಭ್ಯಗಳು, ವಾಯುಯಾನದ ಒತ್ತಡ ಇತ್ಯಾದಿ ಅಂಶಗಳ ಬಗೆಗೆ ಪರಿಶೀಲನೆಯಾಗಿದೆ. ಈ ಹಂತದಲ್ಲಿ ಯಾವುದೇ ತೀರ್ಮಾನ ಆಗಿಲ್ಲ. ಜಿಎಂಆರ್ ಸಂಸ್ಥೆಯ ವರದಿ ನಿರೀಕ್ಷೆ ಮಾಡಲಾಗುತ್ತಿದೆ ಎಂದರು.

ರಾಜ್ಯ ಮೂಲ ಸೌಕರ್ಯ ಅಭಿವೃದ್ಧಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಾಜಕುಮಾರ ಕತ್ರಿ, ಜಿಎಂಆರ್ ಕಂಪನಿಯ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ವಿಕ್ರಮ್ ಆರ್. ಸಿಂಘಾನಿಯಾ, ಕೇಂದ್ರ ರಕ್ಷಣಾಸಚಿವಾಲಯದ ನಿರ್ದೇಶಕಿ ಉಮಾ ನಂದೂರಿ, ಭಾರತೀಯ ವಿಮಾನ ಪ್ರಾಧಿಕಾರ ಮತ್ತು ವಾಯುಪಡೆಯ ಅಧಿಕಾರಿಗಳು ಅವರು ಭೇಟಿ ನೀಡಿದ್ದರು.

ಜಿಲ್ಲಾಧಿಕಾರಿ ಡಾ. ಪಿ.ಸಿ.ಜಾಫರ್ ಅವರು ಈ ತಂಡಕ್ಕೆ ಟರ್ಮಿನಲ್ ಕುರಿತ ಮಾಹಿತಿ ಒದಗಿಸಿದರು. ಪೊಲೀಸ್ ವರಿಷ್ಟಾಧಿಕಾರಿ ತ್ಯಾಗರಾಜನ್, ಉಪ ವಿಭಾಗಾಧಿಕಾರಿ ಪ್ರಕಾಶ್ ನಿಟ್ಟಾಲಿ ಅವರೂ ಈ ಸಂದರ್ಭದಲ್ಲಿ ಹಾಜರಿದ್ದರು.

ಸ್ವಚ್ಛವಾಗದ ಟರ್ಮಿನಲ್ ಆವರಣ: ಅಧಿಕಾರಿಗಳ ತಂಡ ಭೇಟಿ ನೀಡುವ ಸಂದರ್ಭದಲ್ಲಿಯೂ ಟರ್ಮಿನಲ್‌ನ ಆವರಣವನ್ನು ಸ್ವಚ್ಛವಾಗಿಡುವ ಯತ್ನ ನಡೆದಿರುವುದು ಕಂಡುಬಂದಿತು.ಟರ್ಮಿನಲ್ ಆವರಣ ಬಹುತೇಕ ಹುಲ್ಲುಕಡ್ಡಿ, ಕಳೆ ಬೆಳೆದು ತುಂಬಿದ್ದು, ಯಾವುದೋ ಕಟ್ಟಡದ ಪಳೆಯುಳಿಕೆ ಎಂಬ ವಭಾವನೆಯನ್ನುಮೂಡಿಸುವಂತಿತ್ತು.




Source:http://prajavani.net/include/story.php?news=109170&section=111&menuid=10

2 comments:

  1. Hey good go know, we all Bidar people are waiting for this from many days

    ReplyDelete