ರಾಜ್ಯದಲ್ಲಿ ಮೊದಲ ಸಹಕಾರ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಬೀದರ್‌ನಲ್ಲಿ ತಲೆ ಎತ್ತಲಿದೆ. ಜಿಲ್ಲಾ ಸಹಕಾರ ಕೇಂದ್ರ (ಡಿಸಿಸಿ) ಬ್ಯಾಂಕ್ ಮೂಲಕ ಈ ಆಸ್ಪತ್ರೆ ಸ್ಥಾಪಿಸಲಾಗುವುದು ಎಂದು ಬ್ಯಾಂಕ್ ಅಧ್ಯಕ್ಷ, ಹಿರಿಯ ಸಹಕಾರಿ ಧುರೀಣ ಗುರುಪಾದಪ್ಪ ನಾಗಮಾರಪಳ್ಳಿ ತಿಳಿಸಿದ್ದಾರೆ.
ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿ 25 ವರ್ಷವಾದ ಹಿನ್ನೆಲೆಯಲ್ಲಿ ನಗರದಲ್ಲಿ ಆಯೋಜಿಸಿದ್ದ ರಜತ ಮಹೋತ್ಸವ ಸಮಾರಂಭ ಹಾಗೂ ಸಾವಯವ ಕೃಷಿ ತರಬೇತಿ ಕೇಂದ್ರ ಉದ್ಘಾಟನೆ ಸಮಾರಂಭದಲ್ಲಿ ನಾಗಮಾರಪಳ್ಳಿ ಈ ಘೋಷಣೆ ಮಾಡಿದರು. ಹೈಟೆಕ್ ಸೌಲಭ್ಯಗಳುಳ್ಳ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಇದಾಗಲಿದೆ. ಸ್ವಸಹಾಯ ಸಂಘದ ರಚನೆ ಮೂಲಕ ಬ್ಯಾಂಕಿನಿಂದ ನಡೆಯುತ್ತಿರುವ ಆರ್ಥಿಕ ಮೌನ ಕ್ರಾಂತಿಯಂತೆ ಈ ಆಸ್ಪತ್ರೆಯನ್ನು ಸಹ ಮಾದರಿಯಾಗಿ ಮಾಡಲಾಗುತ್ತದೆ ಎಂದರು.
ರೈತರ, ಬಡವರ ಹಾಗೂ ಹಿಂದುಳಿದವರ ಆರೋಗ್ಯ ದೃಷ್ಟಿಯಿಂದ ಈ ಆಸ್ಪತ್ರೆ ಸ್ಥಾಪಿಸಲು ಉದ್ದೇಶಿಸಲಾಗಿದೆ. ಬಡವರಿಗೂ ಸುಲಭವಾಗಿ ಹೈಟೆಕ್ ಚಿಕಿತ್ಸೆ ಲಭ್ಯವಾಗಬೇಕು. ಕಿಡ್ನಿ, ಹೃದ್ರೋಗ ಸೇರಿದಂತೆ ಎಲ್ಲ ಮಾರಕ ಕಾಯಿಲೆಗಳಿಗೆ ಸೂಕ್ತ ಚಿಕಿತ್ಸೆ, ಶಸ್ತ್ರ ಚಿಕಿತ್ಸೆ ಇಲ್ಲಿ ಕಲ್ಪಿಸಲಾಗುವುದು. ಚಿಕಿತ್ಸೆಗಾಗಿ ಜನತೆ ಹೈದರಾಬಾದ್, ಸೋಲಾಪುರ ಇತರೆಡೆ ಅಲೆದಾಡುವುದನ್ನು ಈ ಆಸ್ಪತ್ರೆ ತಪ್ಪಿಸಲಿದೆ. ಆಸ್ಪತ್ರೆ ಸ್ಥಾಪನೆ ಸಂಬಂಧ ಯೋಜನೆ ರೂಪಿಸಲಾಗುತ್ತಿದೆ ಎಂದು ಹೇಳಿದರು.
ಜಿಲ್ಲೆಯ ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕ ಅಭಿವೃದ್ಧಿ ನಮ್ಮ ಧ್ಯೇಯವಾಗಿದೆ. ಈ ನಿಟ್ಟಿನಲ್ಲಿ ಬ್ಯಾಂಕ್‌ನಿಂದ ಹತ್ತಾರು ಕಾರ್ಯಕ್ರಮ ಅನುಷ್ಠಾನಗೊಳಿಸಲಾಗಿದೆ. ಸಾವಯವ ಕೃಷಿ ತರಬೇತಿ ಕೇಂದ್ರ ರಾಜ್ಯದಲ್ಲೇ ಇಲ್ಲಿ ಮೊದಲು ಇಂದು ಕಾರ್ಯಾರಂಭಗೊಂಡಿದೆ. ರಜತ ಮಹೋತ್ಸವ ಸಮಾರಂಭ ನನ್ನ ಜವಾಬ್ದಾರಿ ಇನ್ನಷ್ಟು ಹೆಚ್ಚಿಸಿದೆ. ಜನರ ಹಿತದಿಂದ ಹೊಸ ಯೋಜನೆ ರೂಪಿಸಿ ಸಮಾಜದಲ್ಲಿ ಆರ್ಥಿಕ ಸದೃಢತೆ ಹಾಗೂ ಸ್ವಾವಲಂಬಿಯಿಂದ ಸಮೃದ್ಧತೆ ತರಲು ನಿರಂತರ ಶ್ರಮಿಸುವುದಾಗಿ ಹೇಳಿದರು.
Source:
http://kannada.webdunia.com/newsworld/news/regional/1011/12/1101112053_1.htm
ಮಾಹಿತಿಗಾಗಿ ಧನ್ಯವಾದಗಳು ಮಹಾನ್ ತಲುಪಿಸಲಾಗುತ್ತದೆ ^ ____ ^
ReplyDelete