ಕಬ್ಬು ಬೆಳೆ ಉತ್ಪಾದನೆಯಲ್ಲಿ ಸಾಧನೆ ಮಾಡಿರುವ ಬಗದಲ್ ಗ್ರಾಮದ ಪ್ರಗತಿಪರ ರೈತ ಮೊಹ್ಮದ್ ಇದ್ರಿಸ್ ಅಹ್ಮದಸಾಬ್ ಖಾದ್ರಿ ಅವರಿಗೆ ಕೃಷಿ ವಿಶ್ವವಿದ್ಯಾಲಯದಿಂದ ಕೊಡಮಾಡುವ 'ಕೃಷಿ ಋಷಿ' ಪ್ರಶಸ್ತಿಯನ್ನು ಶನಿವಾರ ಪ್ರದಾನ ಮಾಡಲಾಯಿತು. ತಾಲೂಕಿನ ಜನವಾಡ ಕೃಷಿ ವಿಜ್ಞಾನ ಕೇಂದ್ರದ ಪರಿಸರದಲ್ಲಿ ಆಯೋಜಿಸಿದ್ದ ಕೃಷಿ, ತೋಟಗಾರಿಕೆ ಮತ್ತು ಜಾನುವಾರು ಮೇಳ- 2012ರಲ್ಲಿ ಕೃಷಿ ವಿವಿ ಕುಲಪತಿ ಡಾ| ಬಿ.ವಿ.ಪಾಟೀಲ ಮತ್ತು ಪಶು ವಿಶ್ವವಿದ್ಯಾಲಯದ ಕುಲಪತಿ ಡಾ| ಸಿ.ರೇಣುಕಾಪ್ರಸಾದ ಖಾದ್ರಿ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿದರು. ಹೈಯರ್ ಸೆಕೆಂಡರಿ ಶಿಕ್ಷಣ ಪಡೆದಿರುವ ಖಾದ್ರಿ ಪೂರ್ವಜರು ನಡೆಸಿಕೊಂಡು ಬಂದಿರುವ ಒಕ್ಕಲುತನವನ್ನು ಮೈಗೂಡಿಸಿಕೊಂಡಿದ್ದಾರೆ. ಕೇವಲ ಕೃಷಿಯಿಂದ ಮಾತ್ರ ರೈತರ ಬದುಕು ಹಸನಾಗದು ಎಂದು ನಂಬಿರುವ ಅವರು, ಕೃಷಿ ಜತೆಗೆ ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಇದರಿಂದ ಹಾಲು ಉತ್ಪಾದನೆ ಮತ್ತು ಜಾನುವಾರುಗಳ ಸಗಣಿಯಿಂದ ಗೊಬ್ಬರದ ಸದ್ಬಳಕೆ ಮಾಡಿಕೊಂಡು ಆರ್ಥಿಕ ಆದಾಯ ಹೆಚ್ಚಿಸಿಕೊಳ್ಳುತ್ತಿದ್ದಾರೆ. ಆರಂಭದಲ್ಲಿ ಪ್ರತಿ ಎಕರೆಗೆ 35 ಟನ್ ಕಬ್ಬು ಬೆಳೆಸುತ್ತಿದ್ದ ಅವರು ನಂತರ ತಾಂತ್ರಿಕ ಪದ್ಧತಿ ಅಳವಡಿಸಿಕೊಂಡು ಎಕರೆಗೆ 115 ಟನ್ ಕಬ್ಬು ಇಳುವರಿ ಪಡೆದಿದ್ದಾರೆ. ಐದು ಅಡಿ ಮುಕರಿಗಳಲ್ಲಿ ಮೂರು ಎಕರೆ ಜಮೀನಿನಲ್ಲಿ ಡ್ರಿಪ್ ಮಾಡಿ ಕಬ್ಬು ಬೆಳೆಸುತ್ತ ಬಂದಿದ್ದಾರೆ. ಕಳೆದ ಸಾಲಿನಲ್ಲಿ ಎಕರೆಗೆ 75 ಟನ್ ಕಬ್ಬು ಇಳುವರಿ ಪಡೆದಿದ್ದಾರೆ. ಖಾದ್ರಿ ಅವರೊಬ್ಬ ಪ್ರಯೋಗಶೀಲ ರೈತರಾಗಿದ್ದು, ರಾಜ್ಯ ಅಲ್ಲದೇ ದೇಶದ ವಿವಿಧೆಡೆಯಿಂದ ವಿವಿಧ ಬಗೆಯ ತಳಿಗಳನ್ನು ತಂದು ಬೆಳೆಸುತ್ತಾರೆ. ಈ ಮೂಲಕ ಜಿಲ್ಲೆಯ ಹವಾಗುಣಕ್ಕೆ ಯಾವ ತಳಿ ಹೊಂದಿಕೊಂಡು ಉತ್ತಮ ಇಳುವರಿ ಸಿಗಬಹುದು ಎಂಬುದರ ಮಾಹಿತಿ ಕಂಡುಕೊಳ್ಳುತ್ತಾರೆ. ಇಲ್ಲಿಯವರೆಗೆ ತಮ್ಮ ಜಮೀನಿನಲ್ಲಿ ಕೊಯಿಮತ್ತೂರ, ತಮಿಳುನಾಡು, ಮಹಾರಾಷ್ಟ್ರ ಸೇರಿದಂತೆ ವಿವಿಧೆಡೆಯಿಂದ ತಂದಿರುವ 29 ತಳಿಗಳನ್ನು ಬೆಳೆದ ಅನುಭವ ಅವರಿಗಿದೆ. ಈ ಸಂದರ್ಭದಲ್ಲಿ ಖಾದ್ರಿ ತಮ್ಮ ಕಬ್ಬು ಉತ್ಪಾದನೆಯಲ್ಲಿ ಅನುಸರಿಸಿದ ಕ್ರಮ, ಪದ್ಧತಿಗಳನ್ನು ರೈತರೊಂದಿಗೆ ಹಂಚಿಕೊಂಡರು. ರೈತರು ಕೃಷಿಯತ್ತ ನಿರಾಸಕ್ತಿ ತೋರುತ್ತಿರುವುದೇ ಬೆಳೆಗಳು ಇಳುವರಿಯಲ್ಲಿ ಇಳಿಮುಖ ಆಗಲು ಕಾರಣ. ಹಿಂದೆ ರೈತರು ಶಕ್ತಿ ಮೀರಿ ದುಡಿಯುತ್ತಿದ್ದರು. ಆದರೆ, ಈಗ ನೌಕರರ ಮೇಲೆ ಅವಲಂಬಿತರಾಗುತ್ತಿದ್ದಾರೆ. ಈ ಕಾರಣಕ್ಕಾಗಿ ಬೆಳೆಗಿಂತ ಹುಲ್ಲಿನ ಪ್ರಮಾಣವೇ ಹೆಚ್ಚಾಗಿ ಬೆಳೆಯುತ್ತಿದೆ. ಜಿಲ್ಲೆಯಲ್ಲಿ ಬಳಸುವ ಕಬ್ಬಿನ ತಳಿಯನ್ನೇ ಬೇರೆ ರಾಜ್ಯಗಳಲ್ಲಿ ಬೆಳೆಯುತ್ತಾರೆ. ಆದರೆ, ಅಲ್ಲಿ ನಮಗಿಂತ ಹೆಚ್ಚಿನ ಇಳುವರಿ ಪಡೆಯುತ್ತಾರೆ. ಇದಕ್ಕೆ ಅಲ್ಲಿ ರೈತರೇ ಖುದ್ದಾಗಿ ದುಡಿಯುವುದೇ ಕಾರಣ. ಈ ಪ್ರಯತ್ನ ನಮ್ಮಲ್ಲಿ ನಡೆದರೂ ರೈತರು ಆರ್ಥಿಕವಾಗಿ ಸದೃಢರಾಗಿ ಬೆಳೆಯಲು ಸಾಧ್ಯವಿದೆ. ಕೃಷಿ ಪ್ರೀತಿಸುವ ಅಗತ್ಯವಿದೆ ಎಂದು ಸಲಹೆ ನೀಡಿದರು. ಕಾರ್ಯಕ್ರಮದಲ್ಲಿ ತಡೋಳಾದ ಪೂಜ್ಯ ರಾಜೇಶ್ವರ ಶಿವಾಚಾರ್ಯರು, ಕೃಷಿ ಮಿಷನ್ ಅಧ್ಯಕ್ಷ ಡಾ| ಎಸ್.ಎ. ಪಾಟೀಲ, ಹೈದ್ರಾಬಾದ್‌ನ ವಿಜ್ಞಾನಿ ಡಾ| ಜಿ. ಪಾರ್ಥಸಾರಥಿ, ವಿಶ್ವವಿದ್ಯಾಲಯಗಳ ಪ್ರಮುಖರಾದ ಡಾ| ಬಿ.ಎನ್.ಜನಗೌಡರ, ಡಾ| ಎನ್.ರೇವಣಪ್ಪ, ಡಾ| ಉಸ್ತುರ್ಗೆ, ಕೃಷಿ ಅಧಿಧಿಕಾರಿ ಡಾ| ಪುಥಾÅ, ಶರಣಪ್ಪ ಮುದಗಲ್ ಮತ್ತು ವೆಂಕಟರಾಮರೆಡ್ಡಿ ಮತ್ತು ಡಾ| ರವಿ ದೇಶಮುಖ ಉಪಸ್ಥಿತರಿದ್ದರು.
No comments:
Post a Comment